Publish Date: Tue, 17 Feb 2026 (12:30 IST)
Updated Date: Tue, 17 Feb 2026 (12:33 IST)
ಪಶ್ಚಿಮ ಬಂಗಾಲ: ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಬಂಗಾಳ ಪರ ಆಡುತ್ತಿರುವ ವೇಗಿ ಮೊಹಮ್ಮದ್ ಶಮಿ ಒಂದೇ ಇನಿಂಗ್ಸ್ ನಲ್ಲಿ 8 ವಿಕೆಟ್ ಕಿತ್ತು ಎದುರಾಳಿ ಜಮ್ಮು ಕಾಶ್ಮೀರದ ಬ್ಯಾಟಿಂಗ್ ಹಳಿ ತಪ್ಪಿಸಿದ್ದಾರೆ.
ಪಶ್ಚಿಮ ಬಂಗಾಲ ಮೊದಲ ಇನಿಂಗ್ಸ್ ನಲ್ಲಿ 328 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಮ್ಮು ತಂಡ 302 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಬಂಗಾಳಕ್ಕೆ 26 ರನ್ ಗಳ ಅಲ್ಪ ಮುನ್ನಡೆ ಸಿಕ್ಕಿದೆ. ಎಲ್ಲಕ್ಕಿಂತ ವಿಶೇಷವಾಗಿ ಹೈಲೈಟ್ ಆಗಿದ್ದು ಟೀಂ ಇಂಡಿಯಾದಿಂದ ಅವಗಣನೆಗೆ ಒಳಗಾಗಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ ಬೌಲಿಂಗ್.
ಜಮ್ಮು ಕಾಶ್ಮೀರ 10 ವಿಕೆಟ್ ಗಳ ಪೈಕಿ 8 ವಿಕೆಟ್ ಶಮಿ ಪಾಲಾಗಿದೆ. ಉಳಿದ ಎರಡು ವಿಕೆಟ್ ಮುಕೇಶ್ ಕುಮಾರ್ ಪಾಲಾಗಿದೆ. ಮೊಹಮ್ಮದ್ ಶಮಿ ಎಸೆದ ಒಂದೊಂದು ಎಸೆತ ಕೂಡಾ ಇಂದು ಬೆಂಕಿ ಚೆಂಡಿನಂತಿತ್ತು. ಎದುರಾಳಿಗಳು ಆಡಲಾಗದೇ ಸಂಪೂರ್ಣವಾಗಿ ಹಳಿ ತಪ್ಪಿದ್ದಾರೆ.
ಮೊಹಮ್ಮದ್ ಶಮಿ ಅದ್ಭುತ ಸ್ಪೆಲ್ ನ್ನು ಕೊಂಡಾಡಿರುವ ಅಭಿಮಾನಿಗಳು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗೆ ಟಾಂಗ್ ಕೊಟ್ಟಿದ್ದಾರೆ. ಶಮಿಯನ್ನು ಕಾರಣವಿಲ್ಲದೇ ಹೊರಗಿಟ್ಟವರಿಗೆ ಇದು ತಕ್ಕ ಉತ್ತರ ಎಂದಿದ್ದಾರೆ.