ಮುಂಬೈ: ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಇಂದು 10 ಸಾವಿರ ರನ್ ಗಳಿಸಿದ ದಾಖಲೆ ಮಾಡಿರಬಹುದು. ಆದರೆ ಕೆಲವೇ ವರ್ಷಗಳ ಹಿಂದೆ ಪುರುಷರ ತಂಡದ ವೇಗಿ ಮೊಹಮ್ಮದ್ ಶಮಿ ಎಸೆತದಲ್ಲಿ ತೊಡೆ ಊದಿಸಿಕೊಂಡು ಯಾತನೆ ಪಟ್ಟಿದ್ದ ಘಟನೆ ನಡೆದಿತ್ತು.
ಆಗಿನ್ನೂ ಸ್ಮೃತಿ ಮಂಧಾನ ಇಷ್ಟು ಹೆಸರ ಮಾಡಿರಲಿಲ್ಲ. ಸುಮಾರು 15 ವರ್ಷಗಳ ಹಿಂದಿನ ಘಟನೆ ಇದಾಗಿದೆ. ಈ ಬಗ್ಗೆ ಅವರು ರೋಹಿತ್ ಶರ್ಮಾ ಜೊತೆಗಿನ ಚಿಟ್ ಚ್ಯಾಟ್ ಒಂದರಲ್ಲಿ ಹಂಚಿಕೊಂಡಿದ್ದರು.
ಆಗ ಮೊಹಮ್ಮದ್ ಶಮಿ ಭಾಯಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು. ನೆಟ್ಸ್ ನಲ್ಲಿ ನಾನು ಅವರ ಬಾಲ್ ಎದುರಿಸಿದ್ದೆ. ಆಗ ಅವರು ಗಂಟೆಗೆ 120 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ನನಗೆ ಅಷ್ಟು ಪೇಸ್ ಎದುರಿಸಿ ಗೊತ್ತಿರಲಿಲ್ಲ. ಹೀಗಾಗಿ ನನ್ನ ದೇಹಕ್ಕೆ ತಾಕುವಂತೆ ಎಸೆಯಬೇಡಿ ಎಂದು ಶಮಿ ಭಾಯಿಗೆ ಹೇಳಿದ್ದೆ. ಅವರೂ ಓಕೆ ಎಂದರು. ಮೊದಲ ಎರಡು ಎಸೆತದಲ್ಲಿ ನಾನು ಬೀಟ್ ಆದೆ. ಮೂರನೇ ಎಸೆತ ನೇರವಾಗಿ ನನ್ನ ತೊಡೆಗೇ ಬಿತ್ತು. ಹೇಗೆ ಬಿತ್ತು ಎಂದರೆ ಆ ಜಾಗ ನೀಲಿಗಟ್ಟಿ ಸುಮಾರು 10 ದಿನ ಊದಿಕೊಂಡಿತ್ತು ಎಂದು ಸ್ಮೃತಿ ಹೇಳಿದ್ದರು.
ಇದನ್ನು ಮೊಹಮ್ಮದ್ ಶಮಿ ಕೂಡಾ ಇನ್ನೊಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಫಿಸಿಯೋ ನನಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಹೇಳಿದ್ದರು. ಆದರೆ ಬ್ಯಾಟರ್ ಗಳಿಲ್ಲದೇ ಏಕಾಂಗಿಯಾಗಿ ಬೌಲಿಂಗ್ ಮಾಡಲು ನನಗೆ ಇಷ್ಟವಿರಲಿಲ್ಲ. ಆಗ ನನಗೆ ಸ್ಮೃತಿಗೆ ಬೌಲಿಂಗ್ ಮಾಡಲು ಹೇಳಿದರು. ನನ್ನ ಬೌಲಿಂಗ್ ನಲ್ಲಿ ಆಕೆಗೆ ಗಾಯವಾಯ್ತು. ಅದಾದ ಬಳಿಕ ನಾನು ಇದಕ್ಕಿಂತ ಏಕಾಂಗಿಯಾಗಿ ಬೌಲಿಂಗ್ ಮಾಡುವುದೇ ಉತ್ತಮ ಎಂದು ಬೌಲಿಂಗ್ ಅಭ್ಯಾಸ ಮಾಡಿದೆ ಎಂದಿದ್ದರು. ಅಂದು ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದ ಸ್ಮೃತಿ ಮಂಧಾನ ಇಂದು ಮಹಿಳಾ ಕ್ರಿಕೆಟ್ ನ ನಂ.1 ಬ್ಯಾಟಿಗರಾಗಿ ಪುರುಷ ಕ್ರಿಕೆಟಿಗರಂತೇ ಕೆಲವೊಂದು ಅಪರೂಪದ ದಾಖಲೆ ಮಾಡಿರುವುದು ಅವರ ಸಾಧನೆಯಾಗಿದೆ.