Publish Date: Sat, 03 Jan 2026 (09:06 IST)
Updated Date: Sat, 03 Jan 2026 (09:09 IST)
ಚೆನ್ನೈ: ಈ ಬಾರಿ ಟಿ20 ವಿಶ್ವಕಪ್ ಯಾರು ನೋಡ್ತಾರೆ? ಹೀಗಂತ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೇಸರ ಹಂಚಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ.
ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ನಿಂದ ನಿವೃತ್ತಿಯಾದರೂ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಕ್ರಿಕೆಟ್ ವಿಶ್ಲೇಷಣೆ ನಡೆಸುತ್ತಿರುತ್ತಾರೆ. ಇದೀಗ ಟಿ20 ವಿಶ್ವಕಪ್ ವೇಳಾಪಟ್ಟಿಯ ಬಗ್ಗೆಯೂ ಅವರ ಮಾತನಾಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಟಿ20 ವಿಶ್ವಕಪ್ ಯಾರು ನೋಡ್ತಾರೆ ರೀ... ಇಂಡಿಯಾ ವರ್ಸಸ್ ನಮೀಬಿಯಾ, ಇಂಡಿಯಾ ವರ್ಸಸ್ ಯುಎಸ್ಎ... ಇಂತಹ ಮ್ಯಾಚ್ ಗಳನ್ನು ಜನ ಖಂಡಿತಾ ನೋಡಕ್ಕೆ ಇಷ್ಟಪಡಲ್ಲ. ಇಂತಹ ಪಂದ್ಯಗಳು ಜನರನ್ನು ಮೈದಾನದಿಂದ ದೂರ ಮಾಡುತ್ತವೆ.
ನಾವು ಚಿಕ್ಕವರಿದ್ದಾಗ ವಿಶ್ವಕಪ್ ವೇಳಾಪಟ್ಟಿ ಬಂತೆಂದರೆ ಅದನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳುತ್ತಿದ್ದೆವು. ಆಗ ಆರಂಭಿಕ ಪಂದ್ಯಗಳಲ್ಲೇ ಟೀಂ ಇಂಡಿಯಾ ಜೊತೆ ಇಂಗ್ಲೆಂಡ್, ಶ್ರೀಲಂಕಾದಂತಹ ತಂಡಗಳು ಆಡುತ್ತಿದ್ದವು. ಜನರೂ ಅಷ್ಟೇ ಆಸಕ್ತಿಯಿಂದ ಮೈದಾನಕ್ಕೆ ಬರುತ್ತಿದ್ದರು. ಆದರೆ ಈಗಿನ ವೇಳಾಪಟ್ಟಿಗಳನ್ನು ನೋಡಿದರೆ ಪಂದ್ಯ ನೋಡಬೇಕು ಎಂದೇ ಅನಿಸಲ್ಲ ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ.