Publish Date: Wed, 31 Dec 2025 (11:09 IST)
Updated Date: Wed, 31 Dec 2025 (11:10 IST)
ಮುಂಬೈ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿಚಾರದಲ್ಲಿ ಬಿಸಿಸಿಐ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
2023 ರ ಏಕದಿನ ವಿಶ್ವಕಪ್ ಹೀರೋ ಆಗಿದ್ದ ಮೊಹಮ್ಮದ್ ಶಮಿ ಬಳಿಕ ಟೀಂ ಇಂಡಿಯಾ ಪರ ಒಂದು ಸರಣಿ ಬಿಟ್ಟರೆ ಮತ್ತೆಲ್ಲೂ ಆಯ್ಕೆಯೇ ಆಗಿಲ್ಲ. ಸ್ವತಃ ಶಮಿಯೇ ತಮ್ಮನ್ನು ಕಡೆಗಣಿಸುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರು.
ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಪದೇ ಪದೇ ಶಮಿ ಫಿಟ್ನೆಸ್ ಬಗ್ಗೆ ಬೆರಳು ತೋರಿಸುತ್ತಿದ್ದಾರೆ. ಆದರೆ ಅವರು ಫಿಟ್ ಆಗಿಯೇ ಇದ್ದಾರೆ ಎಂಬುದಕ್ಕೆ ದೇಶೀಯ ಕ್ರಿಕೆಟ್ ನಲ್ಲಿ ತೋರಿಸುತ್ತಿರುವ ಪ್ರದರ್ಶನವೇ ಸಾಕ್ಷಿ. ಹಾಗಿದ್ದರೂ ಅವರನ್ನು ಕಡೆಗಣಿಸುತ್ತಿರುವುದು ಯಾಕೆ ಎಂಬುದಕ್ಕೆ ಸ್ಪಷ್ಟತೆಯಿಲ್ಲ.
ಇದರ ನಡುವೆ ಈಗ ಬಿಸಿಸಿಐ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ. ಶಮಿ ಈಗಲೂ ನಮ್ಮ ಪರಿಗಣನೆಯಲ್ಲಿದ್ದಾರೆ, ಅವರನ್ನು ಕಡೆಗಣಿಸಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಅವರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಬಹುದು. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದಲ್ಲಿ 2027 ರ ಏಕದಿನ ವಿಶ್ವಕಪ್ ಗೂ ಪರಿಗಣಿಸಬಹುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.