ಮುಂಬೈ: ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ದಾಗ ಹುಲಿಯಂತಿದ್ದ ಜಸ್ಪ್ರೀತ್ ಬುಮ್ರಾ ಈಗ ಹೊಸ ನಾಯಕ ಬಂದ ಮೇಲೆ ಫಾರ್ಮ್ ಕಳೆದುಕೊಂಡ್ರಾ ಎಂದು ಸಂಶಯ ಮೂಡುತ್ತಿದೆ.
ಬುಮ್ರಾ ವಿಶ್ವದ ಅತ್ಯಂತ ಮಾರಕ ಬೌಲರ್ ಗಳಲ್ಲಿ ಒಬ್ಬರು. ಎಂಥದ್ದೇ ಪಿಚ್ ಇರಲಿ, ಅವರ ಬೌಲಿಂಗ್ ಎದುರಿಸಲು ಬ್ಯಾಟಿಗರು ನಡುಗುತ್ತಾರೆ. ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಡುವಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು.
ಆದರೆ ಯಾಕೋ ಬುಮ್ರಾ ಕಳೆದ ಎರಡು-ಮೂರು ಸರಣಿಗಳಿಂದ ಕಳೆಗುಂದಿದ್ದಾರೆ. ಇತ್ತೀಚೆಗೆ ಅವರನ್ನು ಕೇವಲ ಟಿ20 ಮತ್ತು ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಮಾತ್ರ ಆಯ್ಕೆ ಮಾಡಲಾಗುತ್ತಿದೆ. ಆದರೆ ಟಿ20 ಫಾರ್ಮ್ಯಾಟ್ ನಲ್ಲೂ ಅವರು ಸಿಕ್ಕಾಪಟ್ಟೆ ರನ್ ಲೀಕ್ ಮಾಡುತ್ತಿದ್ದಾರೆ.
ಮೊದಲ ಓವರ್ ನಿಂದಲೇ ವಿಕೆಟ್ ಪಡೆದು ಎದುರಾಳಿಗಳನ್ನು ಕಟ್ಟಿ ಹಾಕುತ್ತಿದ್ದ ಬುಮ್ರಾ ಎಲ್ಲೋ ಕಳೆದುಹೋಗಿದ್ದಾರೆ. ಹೀಗಾಗಿಯೇ ಭಾರತದ ಬೌಲಿಂಗ್ ಈಗ ಬಡವಾದಂತೆ ತೋರುತ್ತಿದೆ. ಕಳೆದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಬುಮ್ರಾ 19 ರನ್ ನೀಡಿದ್ದರು. ಇದು ಬುಮ್ರಾ ವಿಚಾರದಲ್ಲಿ ಇದು ಅಪರೂಪ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಬುಮ್ರಾ 35 ಪಂದ್ಯಗಳಿಂದ 44 ವಿಕೆಟ್ ಪಡೆದಿದ್ದರು. ಆದರೆ ಇತರರ ನಾಯಕತ್ವದಲ್ಲಿ ಬುಮ್ರಾರಿಂದ ಅಂತಹ ಪ್ರದರ್ಶನ ಬರುತ್ತಿಲ್ಲ. ಇನ್ನೇನು ಟಿ20 ವಿಶ್ವಕಪ್ ಹತ್ತಿರ ಬರುತ್ತಿರುವಾಗ ಬುಮ್ರಾ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.