Publish Date: Wed, 28 Jan 2026 (13:31 IST)
Updated Date: Wed, 28 Jan 2026 (13:33 IST)
ವಿಶಾಖಪಟ್ಟಣಂ: ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಇಂದು ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.
ಈಗಾಗಲೇ ಐದು ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಉಳಿದ ಎರಡು ಪಂದ್ಯಗಳು ಭಾರತಕ್ಕೆ ವಿಶ್ವಕಪ್ ಗೆ ತಯಾರಿ ನಡೆಸಲು ಒಂದು ಪ್ರಾಯೋಗಿಕ ಪಂದ್ಯಗಳಂತೆ. ಇಂದಿನ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯುತ್ತಿದೆ.
ಟೀಂ ಇಂಡಿಯಾ ಕಳೆದ ಮೂರೂ ಪಂದ್ಯಗಳಲ್ಲಿ ತಲೆನೋವಾಗಿದ್ದು ಆರಂಭಿಕ ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್. ವಿಶ್ವಕಪ್ ನಂತಹ ಮಹತ್ವದ ಟೂರ್ನಿಯಲ್ಲಿ ಆರಂಭಿಕರು ಉತ್ತಮ ಆರಂಭ ನೀಡುವುದು ತುಂಬಾ ಮುಖ್ಯವಾಗುತ್ತದೆ. ಹೀಗಾಗಿ ಸಂಜುಗೆ ಇಂದು ಕೊನೆಯ ಅವಕಾಶ ಸಿಗುವ ಸಾಧ್ಯತೆಯಿದೆ. ಒಂದು ವೇಳೆ ಅವರು ಇಂದು ವಿಫಲರಾದರೆ ಅಂತಿಮ ಪಂದ್ಯದಲ್ಲಿ ಭಾರತ ಇಶಾನ್ ಕಿಶನ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.
ಯಾಕೆಂದರೆ ಇಶಾನ್ ಈಗಾಗಲೇ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ವಿಶ್ವಕಪ್ ಟೂರ್ನಿ ವೇಳೆಗೆ ತಿಲಕ್ ವರ್ಮ ತಂಡಕ್ಕೆ ಬಂದರೆ ಸಂಜುಗಿಂತ ಮೊದಲು ಇಶಾನ್ ಮೊದಲ ಆಯ್ಕೆಯಾದರೂ ಅಚ್ಚರಿಯಿಲ್ಲ. ಇಂದಿನ ಪಂದ್ಯದಲ್ಲಿ ಭಾರತ ಕುಲದೀಪ್ ಯಾದವ್ ಬದಲಿಗೆ ಮತ್ತೆ ವರುಣ್ ಚಕ್ರವರ್ತಿಗೆ ಅವಕಾಶ ನೀಡಬಹುದು. ಉಳಿದಂತೆ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ.