ಲಂಡನ್: ವಿಶ್ವ ವಿಖ್ಯಾತ ವೇಗಿ ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿಯಾದ ಬಳಿಕ ಇದೀಗ ಐಪಿಎಲ್ ನತ್ತ ದೃಷ್ಟಿ ನೆಟ್ಟಿದ್ದಾರೆ. ಮುಂದಿನ ಬಾರಿ ಅವರು ಐಪಿಎಲ್ ನಲ್ಲಿ ಆಡುವ ಸಾಧ್ಯತೆಯಿದೆ.
ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಮಾಡಿರುವ ವೇಗಿ ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದರು. ಇದೀಗ ತಮ್ಮ 42 ನೇ ವಯಸ್ಸಿನಲ್ಲಿ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಲು ಹೊರಟಿದ್ದಾರೆ. ಇದುವರೆಗೆ ಐಪಿಎಲ್ ನಲ್ಲಿ ಭಾಗಿಯಾಗದ ಅವರು ನಿವೃತ್ತಿ ಬಳಿಕ ಶ್ರೀಮಂತ ಲೀಗ್ ಕ್ರಿಕೆಟ್ ನಲ್ಲಿ ಭಾಗಿಯಾಗುವ ಆಸಕ್ತಿ ತೋರಿದ್ದಾರೆ.
ಈ ವರ್ಷ ಐಪಿಎಲ್ ಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 17 ವರ್ಷಗಳಲ್ಲಿ ಐಪಿಎಲ್ ನಲ್ಲಿ ಒಮ್ಮೆಯೂ ಅವರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಹೆಸರು ನೊಂದಾಯಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು.
ತಮ್ಮ ವೃತ್ತಿ ಜೀವನದಲ್ಲಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿದ್ದ ಜಿಮ್ಮಿ ಆಂಡರ್ಸನ್ ಒಂದು ವೇಳೆ ಐಪಿಎಲ್ ಹರಾಜಿನ ಪಟ್ಟಿಗೆ ಬಂದರೆ ಅವರನ್ನು ಕೊಳ್ಳಲು ಪ್ರಮುಖ ಫ್ರಾಂಚೈಸಿಗಳು ಮುಗಿಬೀಳಲಿವೆ. 40 ರ ಹರೆಯದಲ್ಲೂ ವೇಗದ ಬೌಲಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಆಂಡರ್ಸನ್ ಅದನ್ನು ಮಾಡಿ ತೋರಿಸಿದ್ದರು. ಈ ವಿಶ್ವ ವಿಖ್ಯಾತ ಬೌಲರ್ ಗೆ ಮುಂಬೈ, ಚೆನ್ನೈ ಸೇರಿದಂತೆ ಪ್ರಮುಖ ಫ್ರಾಂಚೈಸಿಗಳು ಗಾಳ ಹಾಕುವುದರಲ್ಲಿ ಸಂಶಯವಿಲ್ಲ.