ಗುಜರಾತ್ ಟೈಟನ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ತನಗೆ ಔಟ್ ತೀರ್ಪು ನೀಡಿದ್ದಕ್ಕೆ ಅಂಪಾಯರ್ ಜೊತೆಗೇ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ.
ಈ ಪಂದ್ಯವನ್ನು ರಾಜಸ್ಥಾನ್ 58 ರನ್ ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 159 ರನ್ ಗಳಿಗೆ ಆಲೌಟ್ ಆಯಿತು.
ರಾಜಸ್ಥಾನ್ ಬ್ಯಾಟಿಂಗ್ ವೇಳೆ 7 ನೇ ಓವರ್ ನಲ್ಲಿ ರಿಯಾನ್ ಪರಾಗ್ ಹೊಡೆದ ಚೆಂಡು ಬ್ಯಾಟ್ ಸವರಿಕೊಂಡು ಕೀಪರ್ ಕೈ ಸೇರಿತು. ಈ ವೇಳೆ ಮೈದಾನದ ಅಂಪಾಯರ್ ಔಟ್ ತೀರ್ಪು ನೀಡಿದರು. ಆದರೆ ರಿಯಾನ್ ಇದನ್ನು ಪ್ರಶ್ನಿಸಿ ರಿವ್ಯೂ ಪಡೆದರು.
ಥರ್ಡ್ ಅಂಪಾಯರ್ ಪರಿಶೀಲಿಸಿದಾಗ ಚೆಂಡು ಬ್ಯಾಟ್ ಸವರಿರುವುದು ಆಲ್ಟ್ರಾ ಎಡ್ಜ್ ಮೀಟರ್ ನಲ್ಲಿ ಕಾಣಿಸಿಕೊಂಡಿತು. ಹೀಗಾಗಿ ಥರ್ಡ್ ಅಂಪಾಯರ್ ಕೂಡಾ ಔಟ್ ತೀರ್ಪು ನೀಡಿದರು. ಆದರೆ ಬ್ಯಾಟ್ ನೆಲಕ್ಕೆ ಬಡಿದಿದ್ದರಿಂದ ಆಲ್ಟ್ರಾ ಎಡ್ಜ್ ನಲ್ಲಿ ಸಂಜ್ಞೆಯಾಗಿದೆ ಎಂದು ರಿಯಾನ್ ಅಂಪಾಯರ್ ಜೊತೆ ವಾಗ್ವಾದ ನಡೆಸಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಅಂಪಾಯರ್ ಮೈದಾನ ಬಿಟ್ಟು ತೆರಳುವಂತೆ ಸೂಚಿಸಿದರು.