ನವದೆಹಲಿ: ಒಂದೇ ತಿಂಗಳಲ್ಲಿ ಭಾರತಕ್ಕೆ ಮಹಿಳೆಯರ ತಂಡ ಮೂರನೇ ವಿಶ್ವಕಪ್ ಗೆದ್ದುಕೊಟ್ಟಿದೆ. ಭಾರತ ಮಹಿಳೆಯರ ತಂಡ ಈಗ ಕಬಡ್ಡಿ ಚಾಂಪಿಯನ್ ಆಗಿದೆ.
ಢಾಕಾದಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಭಾರತಕ್ಕೆ ಸತತ ಎರಡನೇ ಚಾಂಪಿಯನ್ ಶಿಪ್. ಇದು ಕಬಡ್ಡಿ ವಿಶ್ವಕಪ್ ನ ಎರಡನೇ ಆವೃತ್ತಿ. ಆ ಮೂಲಕ ಕಬಡ್ಡಿಯಲ್ಲಿ ಭಾರತ ತನ್ನ ಪಾರಮ್ಯ ಮೆರೆದಿದೆ.
ಕಳೆದ ಎರಡೂ ಕೂಟಗಳಲ್ಲಿ ಭಾರತ ತಂಡ ಸತತವಾಗಿ 12 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ವಿಶ್ವಕಪ್ ನಲ್ಲಿ ತನ್ನ ಅಜೇಯ ಓಟ ಮುಂದುವರಿಸಿದೆ. ಅದ್ಭುತ ಡಿಫೆನ್ಸ್ ಮತ್ತು ರೈಡಿಂಗ್ ಮೂಲಕ ಎದುರಾಳಿಯನ್ನು ಭಾರತ ಮಕಾಡೆ ಮಲಗಿಸಿತು.
ಆರಂಭದಲ್ಲಿ ಚೈನೀಸ್ ತೈಪೆಯಿಂದಲೂ ಭಾರೀ ಪೈಪೋಟಿಯಿತ್ತು. ಆದರೆ ನಂತರ ಭಾರತ ತಿರುಗಿಬಿದ್ದಿತ್ತು. ಸಂಜು ದೇವಿ ಭಾರತಕ್ಕೆ ಮೊದಲ ಅಂಕ ತಂದುಕೊಟ್ಟರು. ಭಾರತದ ಅಮೋಘ ಆಟದಿಂದ ವಿಶ್ವ ಚಾಂಪಿಯನ್ ಆಯಿತು. ಈ ಮೂಲಕ ಕಳೆದ ಒಂದೇ ತಿಂಗಳಲ್ಲಿ ಭಾರತದ ಮಹಿಳೆಯರು ವಿವಿದ ಕ್ರೀಡೆಗಳಲ್ಲಿ ಮೂರು ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. ಮೊದಲನೆಯದ್ದು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಶಿಪ್, ನಂತರ ಮೊನ್ನೆಯಷ್ಟೇ ಅಂಧರ ವನಿತಾ ಕ್ರಿಕೆಟ್ ವಿಶ್ವಕಪ್ ನಲ್ಲೂ ಭಾರತ ಮಹಿಳೆಯರ ತಂಡ ಚಾಂಪಿಯನ್ ಆಗಿದೆ.