ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೊನ್ನೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಸಾಕಷ್ಟು ವಿರೋಧದ ನಡುವೆಯೂ ಈ ಪಂದ್ಯ ನಡೆದಿತ್ತು. ಇದೇ ಟೂರ್ನಿಯಲ್ಲಿಈ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುವುದು ಪಕ್ಕಾ. ಆಗೇನಾಗುತ್ತೋ ಎಂದು ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರು ಕಾಯುತ್ತಿದ್ದರೂ ಭಾರತೀಯ ಆಟಗಾರರು ಕೈಕುಲುಕಲು ಬಾರದೇ ಡ್ರೆಸ್ಸಿಂಗ್ ರೂಂ ಬಾಗಿಲು ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಟೀಂ ಇಂಡಿಯಾ ಈ ರೀತಿ ಮಾಡಿದ್ದಕ್ಕೆ ಪಾಕ್ ನಾಯಕ ಪ್ರಶಸ್ತಿ ಸಮಾರಂಭದಿಂದ ಹೊರಗುಳಿದು ಪ್ರತಿಭಟಿಸಿದ್ದರು.
ಸೂಪರ್ 4 ಹಂತದಲ್ಲಿ ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಫೈನಲ್ ಗೂ ಇವೆರಡೇ ತಂಡಗಳೇ ಬಂದರೂ ಅಚ್ಚರಿಯಿಲ್ಲ. ಪಾಕಿಸ್ತಾನ ಜೊತೆ ಆಡಲ್ಲ ಆಡಲ್ಲ ಎಂದುಕೊಂಡೇ ಭಾರತಕ್ಕೆ ಮೂರು ಮೂರು ಬಾರಿ ಆಡಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ.
ಮೊದಲು ಮುಖಾಮುಖಿಯಾದಾಗಲೇ ಪಾಕಿಸ್ತಾನಕ್ಕೆ ಭಾರತ ಅವಮಾನ ಮಾಡಿದೆ. ಇದೀಗ ಮತ್ತೊಮ್ಮೆ ಎದುರಾದಾಗ ಪಾಕಿಸ್ತಾನವೂ ಅದಕ್ಕೆ ತಿರುಗೇಟು ನೀಡಲು ಕಾಯುತ್ತಿರಬಹುದು. ಹೀಗಾಗಿ ಈಗ ಪಂದ್ಯದ ಫಲಿತಾಂಶಕ್ಕಿಂತ ಆಟಗಾರರ ವರ್ತನೆ ಹೇಗಿರಬಹುದು, ಏನೆಲ್ಲಾ ಡ್ರಾಮಾ ನಡೆಯಬಹುದು ಎಂದು ಜನ ಕುತೂಹಲದಿಂದ ನೋಡುವಂತಾಗಿದೆ.