ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹಮ್ಮದಾಬಾದ್ ನಲ್ಲಿ ಮಾರ್ಚ್ 9 ರಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳು ಉಪಸ್ಥಿತರಲಿದ್ದಾರೆ.
ಮೊದಲ ದಿನದ ಮೊದಲ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನ್ಸೆ ಮೈದಾನಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಮೊದಲ ದಿನ ಕೆಲವು ಗ್ಯಾಲರಿ ಟಿಕೆಟ್ ಗಳನ್ನು ಬ್ಲಾಕ್ ಮಾಡಲಾಗಿದೆ.
ಇದರಿಂದ ಭಾರತ ಕ್ರಿಕೆಟ್ ತಂಡದ ಅಧಿಕೃತ ಅಭಿಮಾನಿ ಬಳಗ ಭಾರತ್ ಆರ್ಮಿ ಅಸಮಾಧಾನಗೊಂಡಿದೆ. ತಾವು ಈಗಾಗಲೇ ಪಂದ್ಯಕ್ಕೆ ವಿದೇಶಗಳಿಂದ ಆಗಮಿಸಲು ವಿಮಾನ ಟಿಕೆಟ್, ಹೋಟೆಲ್ ಬುಕ್ ಮಾಡಿಕೊಂಡಿದ್ದೇವೆ. ಹೀಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಇಲ್ಲ ಎಂದರೆ ನಮಗೆ ನಷ್ಟವಾಗುತ್ತದೆ ಎಂದು ಭಾರತ್ ಆರ್ಮಿ ಅಸಮಾಧಾನ ವ್ಯಕ್ತಪಡಿಸಿದೆ. ಭಾರತ್ ಆರ್ಮಿ ಮನವಿ ಪರಿಗಣಿಸಿ ಆಯೋಜಕರು ಕೆಲವು ಸೀಟ್ ಗಳನ್ನು ಒದಗಿಸಿದ್ದಾರೆ. ಆದರೆ ಇದು ಸಾಲುತ್ತಿಲ್ಲ ಎನ್ನುವುದು ಅವರ ಅಸಮಾಧಾನ.