ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಏಕದಿನ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೂರನೇ ಪಂದ್ಯವನ್ನು 142 ರನ್ ಗಳಿಂದ ಟೀಂ ಇಂಡಿಯಾ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಪಡೆ 50 ಓವರ್ ಗಳಲ್ಲಿ 356 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಕಾರಣವಾಗಿದ್ದು ಶುಬ್ಮನ್ ಗಿಲ್ ಶತಕ, ಶ್ರೇಯಸ್ ಅಯ್ಯರ್ ಅರ್ಧಶತಕ ಮತ್ತು ಕೆಎಲ್ ರಾಹುಲ್ ಸ್ಪೋಟಕ ಬ್ಯಾಟಿಂಗ್
ಶುಬ್ಮನ್ ಗಿಲ್ ಒಂದೇ ಕ್ಯಾಲೆಂಡರ್ ಇಯರ್ ನಲ್ಲಿ ಎಲ್ಲಾ ಮೂರೂ ಮಾದರಿ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಅಪರೂಪದ ದಾಖಲೆ ಮಾಡಿದರು. ಒಟ್ಟು 102 ಎಸೆತ ಎದುರಿಸಿ ಅವರು 112 ರನ್ ಗಳಿಸಿ ಔಟಾದರು. ಇನ್ನು ಶ್ರೇಯಸ್ ಅಯ್ಯರ್ ಸತತ ಎರಡನೇ ಅರ್ಧಶತಕ ಗಳಿಸಿದರು. 64 ಎಸೆತ ಎದುರಿಸಿದ ಅವರು 78 ರನ್ ಗಳಿಸಿ ತಂಡ 300 ರ ಗಡಿ ದಾಟುವಂತೆ ಮಾಡಿದರು. ಈ ನಡುವೆ ವಿರಾಟ್ ಕೊಹ್ಲಿ 52 ರನ್ ಗಳಿಸುವ ಮೂಲಕ ರನ್ ಬರಗಾಲಕ್ಕೆ ಸಣ್ಣ ವಿರಾಮ ನೀಡಿದರು.
ಭಾರತದ ಮೊತ್ತ 350 ರ ಗಡಿ ದಾಟಲು ಅಡಿಪಾಯ ಹಾಕಿದ್ದು ಕೆಎಲ್ ರಾಹುಲ್. ಇಂದು ತಮ್ಮ ಎಂದಿನ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಹುಲ್ 29 ಎಸೆತಗಳಲ್ಲಿ 40 ರನ್ ಸಿಡಿಸಿದರು.
ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ 34.2 ಓವರ್ ಗಳಲ್ಲಿ 214 ರನ್ ಗಳಿಗೆ ಆಲೌಟ್ ಆಗುವ ಮೂಲಕ ವೈಟ್ ವಾಶ್ ಮುಖಭಂಗ ಅನುಭವಿಸಿತು. ಇಂಗ್ಲೆಂಡ್ ಪರ ಇಂದೂ ಆರಂಭ ಉತ್ತಮವಾಗಿತ್ತು. ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಎಡವಿದರು. ಟಾಮ್ ಬ್ಯಾಂಟನ್ 38, ಬೆನ್ ಡಕೆಟ್ 34, ಗಸ್ ಅಟ್ಕಿನ್ಸನ್ 38 ರನ್ ಗಳಿಸಿದರು. ಭಾರತದ ಪರ ಅರ್ಷ್ ದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಕಬಳಿಸಿದರೆ ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಈ ಗೆಲುವು ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಆತ್ಮವಿಶ್ವಾಸ ಹೆಚ್ಚಿಸಲಿದೆ.