ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದ್ದು ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ಸತ್ವ ಪರೀಕ್ಷೆಯಾಗಿದೆ.
ಈಗಾಗಲೇ ಫಾರ್ಮ್ ಕಳೆದುಕೊಂಡು ತೀವ್ರ ಟೀಕೆಯಲ್ಲಿರುವ ವಿರಾಟ್ ಕೊಹ್ಲಿ ಇಂದು ರನ್ ಗಳಿಸುವ ಒತ್ತಡದಲ್ಲಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ಶತಕ ಸಿಡಿಸಿ ತಮ್ಮ ಮೇಲಿದ್ದ ಒತ್ತಡ ಕಳೆದುಕೊಂಡಿದ್ದಾರೆ. ಇದೀಗ ಕೊಹ್ಲಿ ಸರದಿ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮೊದಲು ಅವರು ಕೊಂಚ ರನ್ ಗಳಿಸಲೇಬೇಕು. ಇಲ್ಲದೇ ಹೋದರೆ ಒಂದು ಕಾಲದಲ್ಲಿ ವಿಶ್ವದ ಘಟಾನುಘಟಿ ಬೌಲರ್ ಗಳ ಬೆವರಿಳಿಸಿದ್ದ ಕೊಹ್ಲಿ ತಂಡಕ್ಕೆ ಹೊರೆಯಾಗಲಿದ್ದಾರೆ.
ಇನ್ನು ಭಾರತೀಯ ಅಭಿಮಾನಿಗಳಿಗೆ ಮತ್ತೊಂದು ಕಳಕಳಿಯೆಂದರೆ ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕ. ಪ್ರಯೋಗ ಪಶುವಿನಂತಾಗಿರುವ ಪ್ರತಿಭಾವಂತ ಕ್ರಿಕೆಟಿಗ ರಾಹುಲ್ ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದು ಅವರಿಗೆ ಈ ಪಂದ್ಯದಲ್ಲಾದರೂ ಮೇಲಿನ ಕ್ರಮಾಂಕ ಸಿಗಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು. ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದ್ದು ಎಲ್ಲಾ ಆಟಗಾರರಿಗೆ ಮತ್ತೊಮ್ಮೆ ಅಭ್ಯಾಸದ ವೇದಿಕೆಯಾಗಿರಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.