ಕಟಕ್: ವಿರಾಟ್ ಕೊಹ್ಲಿ ಎಂದರೆ ದೇವರಂತೆ ಆರಾಧಿಸುವ ಎಷ್ಟೋ ಅಭಿಮಾನಿಗಳಿದ್ದಾರೆ. ಯುವ ಕ್ರಿಕೆಟಿಗರಿಗೆ ಅವರೆಂದರೆ ಮಾಡೆಲ್. ಇದೀಗ ವಿರಾಟ್ ಕೊಹ್ಲಿ ಬೌಂಡರಿ ಗೆರೆ ಬಳಿ ಬಾಲ್ ಬಾಯ್ ಗೆ ಕೈ ಕುಲುಕಿದ ಕ್ಷಣ ಮತ್ತು ಆತನ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿವೈರಲ್ ಆಗಿದೆ.
ಕಟಕ್ ನಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ ಎಂಬ ಸುದ್ದಿ ತಿಳಿದೇ ಅನೇಕ ಅಭಿಮಾನಿಗಳು ಸ್ಟೇಡಿಯಂಗೆ ಲಗ್ಗೆಯಿಟ್ಟಿದ್ದರು. ಟಾಸ್ ವೇಳೆ ರೋಹಿತ್, ಇಂದಿನ ಪಂದ್ಯದಲ್ಲಿ ಕೊಹ್ಲಿ ಆಡಲಿದ್ದಾರೆ ಎಂದು ಹೇಳಿದ ತಕ್ಷಣ ಮೈದಾನದಲ್ಲಿದ್ದ ಅಭಿಮಾನಿಗಳು ಸಂಭ್ರಮಿಸಿದ್ದರು.
ಅವರನ್ನು ಹತ್ತಿರದಿಂದ ನೋಡಲು ಬಯಸುವ ಅಭಿಮಾನಿಗಳಲ್ಲಿ ಬಾಲ್ ಬಾಯ್ ಗಳೂ ಇದ್ದರು. ಬೌಂಡರಿ ಗೆರೆ ಬಳಿ ಕುಳಿತು ಬಾಲ್ ಬಾಯ್ ಆಗಿದ್ದ ಇಬ್ಬರು ಬಾಲಕರಿಗೆ ಕೊಹ್ಲಿ ಫೀಲ್ಡಿಂಗ್ ವೇಳೆ ಬಳಿ ಹೋಗಿ ಕೈ ಕುಲುಕಿ ಅವರ ಆಸೆ ಈಡೇರಿಸಿದ್ದಾರೆ.
ಕೊಹ್ಲಿ ಜೊತೆ ಕೈ ಕುಲುಕಿದ ಆ ಬಾಲಕನ ಖುಷಿ ಹೇಳತೀರದಾಗಿತ್ತು. ಖುಷಿಯಿಂದ ಎದೆ ಹಿಡಿದುಕೊಂಡು ಆತ ಕುಳಿತೇ ಬಿಟ್ಟಿದ್ದ. ಆತನ ರಿಯಾಕ್ಷನ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.