ನಾಗ್ಪುರ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಟೀಂ ಇಂಡಿಯಾ ಯುವ ವೇಗಿ ಹರ್ಷಿತ್ ರಾಣಾ ಒಂದೇ ಓವರ್ ನಲ್ಲಿ 26 ರನ್ ಚಚ್ಚಿಸಿಕೊಂಡ ಬಳಿಕ ಕಮಾಲ್ ಮಾಡಿದ್ದಾರೆ.
ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ 14 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ. ಇಂಗ್ಲೆಂಡ್ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಫಿಲಿಪ್ ಸಾಲ್ಟ್ ಮತ್ತು ಬೆನ್ ಡಕೆಟ್ ಸ್ಪೋಟಕ ಆರಂಭ ನೀಡಿದರು. ಈ ಪೈಕಿ ಸಾಲ್ಟ್ 26 ಎಸೆತಗಳಿಂದ 3 ಸಿಕ್ಸರ್, 5 ಬೌಂಡರಿ ಸಹಿತ 43 ರನ್ ಗಳಿಸಿದರೆ ಡಕೆಟ್ 29 ಎಸೆತಗಳಲ್ಲಿ 32 ರನ್ ಗಳಿಸಿದರು.
ಸಾಲ್ಟ್ ಅಬ್ಬರಕ್ಕೆ ಟೀಂ ಇಂಡಿಯಾ ಬೌಲರ್ ಗಳು ಆರಂಭದಲ್ಲಿ ಅಸಹಾಯಕರಾದರು. ವಿಶೇಷವಾಗಿ ಹರ್ಷಿತ್ ರಾಣಾ ಒಂದೇ ಓವರ್ ನಲ್ಲಿ 26 ರನ್ ಚಚ್ಚಿಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಹಲವರು ಆಗಲೇ ಸೋಷಿಯಲ್ ಮೀಡಿಯಾದಲ್ಲಿ ಹರ್ಷಿತ್ ರನ್ನು ಯಾಕೆ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕಿಡಿ ಕಾರಲು ಶುರು ಮಾಡಿದ್ದರು.
ಆದರೆ ಆಗ ಹರ್ಷಿತ್ ಒಂದೇ ಓವರ್ ನಲ್ಲಿ 2 ವಿಕೆಟ್ ಕಬಳಿಸಿ ಕಮಾಲ್ ಮಾಡಿದರು. ಫಿಲ್ ಸಾಲ್ಟ್ ಸ್ವಯಂಕೃತ ಅಪರಾಧದಿಂದ ರನೌಟ್ ಆದರೆ ಅವರ ಜೊತೆಗಿದ್ದ ಡಕೆಟ್ ಹರ್ಷಿತ್ ಬೌಲಿಂಗ್ ನಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು. ಅದೇ ಓವರ್ ನಲ್ಲಿ ಹ್ಯಾರಿ ಬ್ರೂಕ್ ರನ್ನೂ ಶೂನ್ಯಕ್ಕೆ ಔಟ್ ಮಾಡಿದ ಹರ್ಷಿತ್ ಭರ್ಜರಿ ಕಮ್ ಬ್ಯಾಕ್ ಮಾಡಿದರು.