ಕಟಕ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಹಬ್ಬವಾಗಿದೆ. ರೋಹಿತ್ ಶರ್ಮಾ ನಾಟ್ ಫಿನಿಶ್ಡ್ ಎಂದು ತೋರಿಸಿಕೊಟ್ಟಿದ್ದಾರೆ.
ಇಷ್ಟು ದಿನ ಫಾರ್ಮ್ ಕೊರತೆಯಿಂದ ತೀವ್ರ ಟೀಕೆಗೊಳಗಾಗಿದ್ದ ರೋಹಿತ್ ಶರ್ಮಾ ಇಂದು ಅಕ್ಷರಶಃ ಹಿಟ್ ಮ್ಯಾನ್ ಅವತಾರ ತಾಳಿದ್ದರು. ತಮ್ಮ ಎಂದಿನ ಸಿಕ್ಸರ್, ಬೌಂಡರಿಗಳ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದರು. ತಾವು ಆಡುತ್ತಿದ್ದ ಪ್ರತಿಯೊಂದು ಬಾಲ್ ನನ್ನೂ ಅವರು ಇಂದು ಆತ್ಮವಿಶ್ವಾಸದಿಂದಲೇ ಆಡುತ್ತಿದ್ದುದು ಗಮನಕ್ಕೆ ಬಂದಿತ್ತು. ಇದರೊಂದಿಗೆ ಇಷ್ಟು ದಿನಗಳ ಟೀಕೆಗೆ ರೋಹಿತ್ ಒಂದೇ ಇನಿಂಗ್ಸ್ ನಿಂದ ತಿರುಗೇಟು ನೀಡಿದಂತಾಗಿದೆ. ರೋಹಿತ್ ಅಬ್ಬರ ಎಷ್ಟಿತ್ತೆಂದರೆ 304 ರನ್ ದೊಡ್ಡ ಮೊತ್ತವೆಂದೇ ಅನಿಸುತ್ತಿಲ್ಲ. ಇತ್ತೀಚೆಗಿನ ವರದಿ ಬಂದಾಗ ಒಟ್ಟು 80 ಎಸೆತ ಎದುರಿಸಿದ ಅವರು 7 ಸಿಕ್ಸರ್, 11 ಬೌಂಡರಿಗಳೊಂದಿಗೆ 110 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡಿದ್ದ ಉಪನಾಯಕ ಶುಬ್ಮನ್ ಗಿಲ್. ಒಟ್ಟು 52 ಎಸೆತ ಎದುರಿಸಿದ ಗಿಲ್ 60 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ವಿಫಲರಾದರು. 8 ಎಸೆತ ಎದುರಿಸಿದ ಅವರು ಗಳಿಸಿದ್ದು ಕೇವಲ 5 ರನ್. ಇತ್ತೀಚೆಗಿನ ವರದಿ ಬಂದಾಗ ಭಾರತ 26.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ.
ಇಂದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 49.5 ಓವರ್ ಗಳಲ್ಲಿ 304 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದರು.