ಮುಂಬೈ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಇದೇ 19ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಭಾರತದ ಪಂದ್ಯ ಮಾತ್ರ ಯುಎಇನಲ್ಲಿ ನಡೆಯಲಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ತಂಡವನ್ನು ಜನವರಿಯಲ್ಲಿ ಪ್ರಕಟಿಸಿತ್ತು. ಇದೀಗ ತಂಡಗಳನ್ನು ಬದಲಾಯಿಸಲು ಕೊನೆಯ ದಿನಾಂಕವೂ ಹತ್ತಿರ ಬಂದಿದೆ. ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಪರ ಮಿಂಚುತ್ತಿರುವ ಶಾರ್ದೂಲ್ ಠಾಕೂರ್ ಅವರಿಗೆ ಚಾಂಪಿಯನ್ಸ್ ಟ್ರೋಫಿಗೆ ಟಿಕೆಟ್ ಒಲಿಯುವ ಸಾಧ್ಯತೆ ದಟ್ಟವಾಗಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ನಂತರ ಅವರ ಪ್ರದರ್ಶನ ನೀರಸವಾಗಿದ್ದರಿಂದ ತಂಡದಿಂದ ಕೈಬಿಡಲಾಗಿತ್ತು. , ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಶಾರ್ದೂಲ್ ಆಯ್ಕೆಯಾಗಿರಲಿಲ್ಲ.
ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ 33 ವರ್ಷದ ಶಾರ್ದೂಲ್ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಅವರ ಆಲ್‌ರೌಂಡ್ ಆಟ ಗಮನ ಸೆಳೆಯುತ್ತಿದೆ. ಅವರು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 44ರ ಸರಾಸರಿಯಲ್ಲಿ 396 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.
ಠಾಕೂರ್ ಅವರು ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದು, 21.10 ಸರಾಸರಿಯಲ್ಲಿ 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹರಿಯಾಣ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೂರನೇ ದಿನವಾದ ಸೋಮವಾರ ಅವರು ಆರು ವಿಕೆಟ್ ಕಬಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಭಾರತ ತಂಡಕ್ಕೆ ನಾನು ಆಕಾಂಕ್ಷಿ. ಈಗ ನಾನು ರಣಜಿ ಟ್ರೋಫಿ ಆಡುತ್ತಿದ್ದೇನೆ. ದೇಶಕ್ಕಾಗಿ ಆಡಲು ಎದುರು ನೋಡುತ್ತಿದ್ದೇನೆ ಎಂದಿರುವ ಠಾಕೂರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.