ಅಹಮದಾಬಾದ್: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೊನೆಗೂ ಲಯಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಅವರು ಅಮೋಘ ಅರ್ಧಶತಕ ಗಳಿಸಿ ಟೀಕಾಕಾರ ಬಾಯಿ ಮುಚ್ಚಿಸಿದ್ದಾರೆ.
ಇದೇ 17ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ 36 ವರ್ಷದ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ಧರೆ. ಆದರೆ, ಅವರ ಫಾರ್ಮ್ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿತ್ತು. ಇದೀಗ ಅವರ ಬ್ಯಾಟ್‌ನಿಂದ ರನ್ ಪ್ರವಾಹ ಆರಂಭವಾಗಿದೆ.
15 ತಿಂಗಳುಗಳಿಂದ ರನ್ ಬರವನ್ನು ಕೊಹ್ಲಿ ಎದುರಿಸುತ್ತಿದ್ದಾರೆ. ಕೊನೆಯ 4 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು ಬರೀ 63 ರನ್. ಇದರಲ್ಲಿ 24 ಸರ್ವಾಧಿಕ. ಇದೀಗ ಅರ್ಧಶತಕ ಗಳಿಸಿದ್ದಾರೆ. 55 ಎಸೆತಗಳಲ್ಲಿ 52 ಗಳಿಸಿ ಔಟಾದರು. ಏಕದಿನದಲ್ಲಿ ಕೊಹ್ಲಿ ಕೊನೆಯ ಸಲ 50 ರನ್ ಗಡಿ ದಾಟಿದ್ದು ಇದೇ ಅಹಮದಾಬಾದ್ ಅಂಗಳದಲ್ಲಿ. ಅದು ಒಂದೂವರೆ ವರ್ಷಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಂಬುದು ವಿಶೇಷ.
ಟಾಸ್ ಗೆದ್ದ ಇಂಗ್ಲೆಂಡ್ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಕೇವಲ 1 ರನ್‌ಗೆ ಔಟಾದರು. ಆದರೆ, ಶುಭಮನ್ ಗಿಲ್ ಮತ್ತು ಕೊಹ್ಲಿ ಎಚ್ಚರಿಕೆ ಆಟವಾಡಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಸೇರಿಸಿದರು. ಗಿಲ್ ಹ್ಯಾಟ್ರಿಕ್ ಅರ್ಧಶತಕ ಪೂರೈಸಿ ಕ್ರೀಸ್‌ನಲ್ಲಿದ್ದಾರೆ.