Publish Date: Wed, 02 Jul 2025 (15:10 IST)
Updated Date: Wed, 02 Jul 2025 (15:13 IST)
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಎಜ್ ಬಾಸ್ಟನ್ ನಲ್ಲಿ ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ ಮಾಡಲಾಗಿದೆ.
ಕಳೆದ ಪಂದ್ಯವನ್ನು ಗೆಲ್ಲುವ ಎಲ್ಲಾ ಅವಕಾಶಗಳಿದ್ದೂ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ನಿಂದಾಗಿ ಸೋತಿತ್ತು. ಜೊತೆಗೆ ಕೆಳ ಕ್ರಮಾಂಕದ ಬ್ಯಾಟಿಗರು ವಿಫಲರಾಗಿದ್ದರು. ಹೀಗಾಗಿ ಈ ಪಂದ್ಯಕ್ಕೆ ಭಾರೀ ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ.
ನಿರೀಕ್ಷೆಯಂತೇ ಜಸ್ಪ್ರೀತ್ ಬುಮ್ರಾ ಈ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಅವರ ಸ್ಥಾನಕ್ಕೆ ಆಕಾಶ್ ದೀಪ್ ಗೆ ಸ್ಥಾನ ನೀಡಲಾಗಿದೆ. ಅರ್ಷ್ ದೀಪ್ ಸಿಂಗ್ ಮತ್ತೆ ಬೆಂಚ್ ಕಾಯಿಸಬೇಕಾಗಿದೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ್ದ ಸಾಯಿ ಸುದರ್ಶನ್ ಸ್ಥಾನ ಕಳೆದುಕೊಂಡಿದ್ದಾರೆ. ಕರುಣ್ ನಾಯರ್ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ತಂಡ ಇಂತಿದೆ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಬ್ಮನ್ ಗಿಲ್ (ನಾಯಕ) ರಿಷಭ್ ಪಂತ್ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ.