ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಳೆಯಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಒಂದು ಬದಲಾವಣೆಯಂತೂ ಖಚಿತವೆನ್ನಲಾಗಿದೆ.
ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಎಲ್ಲಾ ಅವಕಾಶವಿದ್ದೂ ಸೋತ ಭಾರತ ಈಗ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 0-1 ರಿಂದ ಹಿನ್ನಡೆ ಅನುಭವಿಸಿದೆ.
ಮೊದಲ ಪಂದ್ಯದಲ್ಲಿ ತಂಡದ ಅಗ್ರ ಕ್ರಮಾಂಕದ ಬ್ಯಾಟಿಗರ ಬಗ್ಗೆ ಸೊಲ್ಲೆತ್ತುವಂತಿರಲಿಲ್ಲ. ಆದರೆ ಕೆಳ ಕ್ರಮಾಂಕದ ಬ್ಯಾಟಿಗರು ಕೈ ಕೊಟ್ಟರು. ಹೀಗಾಗಿ ಕರುಣ್ ನಾಯರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಕಮ್ ಬ್ಯಾಕ್ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಟೀಂ ಇಂಡಿಯಾ ಬೌಲಿಂಗ್ ನಲ್ಲಿ ಬದಲಾವಣೆಯಾಗಲಿದೆ. ಕಳೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಾತ್ರ ಏಕೈಕ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಕುಲದೀಪ್ ಯಾದವ್ ಅಥವಾ ವಾಷಿಂಗ್ಟನ್ ಸುಂದರ್ ರನ್ನೂ ಆಡಿಸುವ ಮೂಲಕ ಎರಡು ಸ್ಪಿನ್ನರ್ ತಂತ್ರ ಹೂಡಬಹುದು ಎನ್ನಲಾಗುತ್ತಿದೆ. ಇವರಲ್ಲಿ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಹೆಚ್ಚು. ಯಾಕೆಂದರೆ ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೂ ನೆರವಾಗಬಲ್ಲರು. ಹಾಗಿದ್ದಲ್ಲಿ ಶ್ರಾದ್ಧೂಲ ಠಾಕೂರ್ ಸ್ಥಾನ ಕಳೆದುಕೊಳ್ಳಬಹುದು.