Publish Date: Thu, 26 Jun 2025 (09:30 IST)
Updated Date: Thu, 26 Jun 2025 (09:33 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದ್ದು ಇದೀಗ ಎರಡನೇ ಪಂದ್ಯಕ್ಕೆ ತಂಡಗಳು ಸಜ್ಜಾಗುತ್ತಿವೆ. ಎರಡನೇ ಪಂದ್ಯ ಎಲ್ಲಿ ನಡೆಯುತ್ತದೆ, ಯಾವಾಗ ಎಲ್ಲಾ ವಿವರಗಳು ಇಲ್ಲಿವೆ.
ಇಂಗ್ಲೆಂಡ್ ವಿರುದ್ಧ ಭಾರತ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಈ ಪೈಕಿ ಮೊದಲ ಪಂದ್ಯ ಹೆಡಿಂಗ್ಲೆಯಲ್ಲಿ ಮುಕ್ತಾಯವಾಗಿದೆ. ಇದನ್ನು ಭಾರತ 5 ವಿಕೆಟ್ ಗಳಿಂದ ಸೋತು ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದೆ.
ಇದೀಗ ಎರಡನೇ ಪಂದ್ಯ ನಡೆಯುವುದು ಎಡ್ಜ್ ಬಾಸ್ಟನ್ ನಲ್ಲಿ. ಈ ಪಂದ್ಯ ಜುಲೈ 2 ರಿಂದ 6 ರವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ಭಾರತಕ್ಕೆ ಒಂದು ವಾರಗಳ ವಿಶ್ರಾಂತಿ ದೊರೆಯಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಕೆಳ ಕ್ರಮಾಂಕದ ಬ್ಯಾಟಿಗರು ವಿಫಲರಾಗಿದ್ದರು. ಹೀಗಾಗಿ ಕೆಲವು ಬದಲಾವಣೆ ಖಚಿತವಾಗಿದೆ. ಕರುಣ್ ನಾಯರ್ 8 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದರೂ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಹೀಗಾಗಿ ಅವರ ಬದಲು ಮತ್ತೆ ಆಸೀಸ್ ಸರಣಿಯಲ್ಲಿ ಮಿಂಚಿದ್ದ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಬೌಲಿಂಗ್ ನಲ್ಲಿ ಒಂದು ವೇಳೆ ಜಸ್ಪ್ರೀತ್ ಬುಮ್ರಾ ಗೈರಾದರೆ ಅರ್ಷ್ ದೀಪ್ ಸಿಂಗ್ ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಉಳಿದಂತೆ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ.