ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯ ನಡೆಯಲಿರುವ ಎಜ್ ಬಾಸ್ಟನ್ ಮೈದಾನದ ಪಿಚ್ ಯಾರಿಗೆ ಸಹಕಾರಿಯಾಗಲಿದೆ ಇಲ್ಲಿದೆ ವಿಶ್ಲೇಷಣೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಎಲ್ಲಾ ಅವಕಾಶಗಳಿದ್ದೂ ಟೀಂ ಇಂಡಿಯಾ ತನ್ನ ಸ್ವಯಂಕೃತ ಅಪರಾಧಗಳಿಂದ ಸೋತಿತು. ಆ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕಾಡಿದ್ದು ಫೀಲ್ಡಿಂಗ್ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ. ಈ ಪಂದ್ಯದಲ್ಲಿ ಮತ್ತೆ ಆ ಸಮಸ್ಯೆಯಾಗದಂತೆ ಕೋಚ್ ಗಂಭೀರ್ ಕೆಳ ಕ್ರಮಾಂಕದ ಬ್ಯಾಟಿಗರಿಗೆ ಕಠಿಣ ಅಭ್ಯಾಸ ನಡೆಸಲು ಸೂಚಿಸಿದ್ದರು.
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಕೆಲವೊಂದು ಬದಲಾವಣೆಗಳೊಂದಿಗೆ ತಂಡ ಕಣಕ್ಕಿಳಿಯಲಿದ್ದು ಎಜ್ ಬಾಸ್ಟನ್ ಪಿಚ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಮೂಲಗಳ ಪ್ರಕಾರ ಎಜ್ ಬಾಸ್ಟನ್ ಪಿಚ್ ಮೊದಲ ಎರಡು ದಿನ ವೇಗದ ಬೌಲರ್ ಗಳಿಗೆ ಸಹಕಾರಿಯಾಗಲಿದೆ. ಮೊದಲ ಪಂದ್ಯಕ್ಕೆ ಹೋಲಿಸಿದರೆ ಈ ಪಂದ್ಯದಲ್ಲಿ ಪಿಚ್ ಹೆಚ್ಚು ಸ್ಪರ್ಧಾತ್ಮಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮೂರು ಮತ್ತು ನಾಲ್ಕನೇ ದಿನದಂದು ಬ್ಯಾಟಿಗರಿಗೆ ಮತ್ತು ಕೊನೆಯ ದಿನ ಸ್ಪಿನ್ನರ್ ಗಳಿಗೂ ಕೊಂಚ ನೆರವಾಗುವಂತಹ ಪಿಚ್ ತಯಾರಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯದಲ್ಲೂ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿರಲಿದೆ. ಈ ಪಂದ್ಯ ಇಂದು ಅಪರಾಹ್ನ 3.30 ಕ್ಕೆ ಆರಂಭವಾಗಲಿದ್ದು ಸೋನಿ ನೆಟ್ ವರ್ಕ್ ಆಪ್, ಟಿವಿ ಅಥವಾ ಜಿಯೋ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.