ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಎಲ್ಲವೂ ಪಿಂಕ್ ಮಯವಾಗಲಿದೆ. ಅದಕ್ಕೆ ಕಾರಣವೇನು ಇಲ್ಲಿದೆ ವಿವರ.
ನಾಳೆಯಿಂದ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಬಣ್ಣದಲ್ಲಿ ಕಣಕ್ಕಿಳಿಯಲಿದ್ದಾರೆ. ಆಟಗಾರರ ಕ್ಯಾಪ್ ಧರಿಸಿ ಆಡಲು ಕಾರಣವಿದೆ.
ಪ್ರತೀ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಪಂದ್ಯವನ್ನು ಪಿಂಕ್ ಕ್ಯಾಪ್ ಧರಿಸಿ ಆಸ್ಟ್ರೇಲಿಯಾ ಆಟಗಾರರು ಆಡುತ್ತಾರೆ. ಪಿಂಕ್ ಬಣ್ಣ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿಯನ್ನು ಸೂಚಿಸುತ್ತದೆ. ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಆಡುತ್ತಾರೆ.
ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೆನ್ ಮೆಕ್ ಗ್ರಾಥ್ ಇಂತಹದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಅವರ ಪತ್ನಿ ಸ್ತನ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಅದಾದ ಬಳಿಕ ಪತ್ನಿಯ ನೆನಪಿನಲ್ಲಿ ಅವರು ಇಂತಹದ್ದೊಂದು ಅಭಿಯಾನವನ್ನು ಆರಂಭಿಸಿದ್ದರು. ಇದೀಗ ಪ್ರತೀ ವರ್ಷವೂ ಸಿಡ್ನಿಯಲ್ಲಿ ಆಡುವ ಮೊದಲ ಪಂದ್ಯದಲ್ಲಿ ಆಸೀಸ್ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಅಭಿಯಾನದ ಭಾಗವಾಗುತ್ತಾರೆ.