ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾದ ನಾಯಕ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಬಳಿಕ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿಯಾಗುವ ಸಾಧ್ಯತೆಯಿದೆ.
ಭಾರತ ತಂಡದ ಪ್ರದರ್ಶನ ವೀಕ್ಷಿಸಲು ಸ್ವತಃ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಆಸ್ಟ್ರೇಲಿಯಾದಲ್ಲಿದ್ದಾರೆ. ರೋಹಿತ್ ಸತತ ವೈಫಲ್ಯದಿಂದಾಗಿ ತಂಡದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ರೋಹಿತ್ ಭವಿಷ್ಯದ ಬಗ್ಗೆ ತೀರ್ಮಾನಿಸಲು ಅಜಿತ್ ಅಗರ್ಕರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಿಡ್ನಿ ಟೆಸ್ಟ್ ನಲ್ಲೂ ರೋಹಿತ್ ವಿಫಲರಾದರೆ ಅದೇ ಟೆಸ್ಟ್ ಅವರ ಪಾಲಿಗೆ ಕೊನೆಯ ಟೆಸ್ಟ್ ಸರಣಿಯಾಗಲಿದೆ. ಇದಾದ ಬಳಿಕ ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಲಿರುವ ರೋಹಿತ್ ಏಕದಿನ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ತನಕ ಮುಂದುವರಿಯಬಹುದು ಎನ್ನಲಾಗಿದೆ.
ಜನವರಿ 3 ರಿಂದ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಭಾರತ ಗೆದ್ದುಕೊಂಡರೂ ಡಬ್ಲ್ಯುಟಿಸಿ ಫೈನಲ್ ನಲ್ಲಿ ಆಡುವ ಅವಕಾಶ ಸಿಗಲಾರದು. ಹೀಗಾಗಿ ರೋಹಿತ್ ಇದೇ ಸರಣಿಯ ಮೂಲಕ ನಿವೃತ್ತಿಯಾಗಬಹುದು ಎನ್ನಲಾಗಿದೆ. ಈಗಾಗಲೇ ಆಯ್ಕೆ ಸಮಿತಿ ಜೊತೆ ಬಿಸಿಸಿಐ ಉನ್ನತ ಅಧಿಕಾರಿಗಳೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.