ಮುಂಬೈ: 2026 ರಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಈ ಬಾರಿ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿದೆ. ಆದರೆ ಏನಾದರೂ ಆಗಲೀ ಅಹಮ್ಮದಾಬಾದ್ ನಲ್ಲಿ ಫೈನಲ್ ಬೇಡ ಅಂತಿದ್ದಾರೆ ಫ್ಯಾನ್ಸ್.
ಟಿ20 ವಿಶ್ವಕಪ್ ಪಂದ್ಯ ನಡೆಯಲಿರುವ ಮೈದಾನಗಳು ಬಹುತೇಕ ಅಂತಿಮಗೊಂಡಿವೆ. ಈ ಪೈಕಿ ಫೈನಲ್ ಪಂದ್ಯಕ್ಕೆ ಅಹಮ್ಮದಾಬಾದ್, ಮುಂಬೈ, ಚೆನ್ನೈ, ಕೋಲ್ಕತ್ತಾ ನಗರಗಳು ಅಂತಿಮ ಪಟ್ಟಿಯಲ್ಲಿವೆ. ಯಾವ ತಾಣದಲ್ಲಿ ಫೈನಲ್ ನಡೆಯಲಿದೆ ಎನ್ನುವುದು ನಂತರ ಅಂತಿಮವಾಗಲಿದೆ.
ಆದರೆ ಈ ಲಿಸ್ಟ್ ನೋಡಿ ಅಭಿಮಾನಿಗಳು ಮಾತ್ರ ಅಹಮ್ಮದಾಬಾದ್ ನಲ್ಲಿ ಬೇಡವೇ ಬೇಡ ಎನ್ನುತ್ತಿದ್ದಾರೆ. ಇದಕ್ಕೆ ಮೊದಲು ಅಹಮ್ಮದಾಬಾದ್ ನಲ್ಲಿ ಏಕದಿನ ವಿಶ್ವಕಪ್ ಫೈನಲ್ ನಡೆದಿತ್ತು. ಆ ಪಂದ್ಯದಲ್ಲಿ ಭಾರತ ಆಘಾತಕಾರೀ ಸೋಲು ಅನುಭವಿಸಿತ್ತು.
ಆದರೆ ಮುಂಬೈನಲ್ಲಿ ಇದುವರೆಗೆ ನಡೆದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ. 2011 ರ ಏಕದಿನ ವಿಶ್ವಕಪ್ ಫೈನಲ್ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಮಹಿಳೆಯರ ಏಕದಿನ ವಿಶ್ವಕಪ್ ಕೂಡಾ ನಡೆದಿದ್ದು ಮುಂಬೈನಲ್ಲಿ ಇವೆರಡರಲ್ಲೂ ಭಾರತ ಗೆದ್ದಿದೆ. ಹೀಗಾಗಿ ಮುಂಬೈ ಅದೃಷ್ಟದ ತಾಣ ಮತ್ತು ಸೀಮಿತ ಓವರ್ ಗಳಿಗೆ ಹೇಳಿ ಮಾಡಿಸಿದ ಪಿಚ್ ಇರುವ ತಾಣ ಎನ್ನುವುದು ಅಭಿಮಾನಿಗಳ ಆಗ್ರಹವಾಗಿದೆ.