ದುಬೈ: ಏಷ್ಯಾ ಕಪ್ ನಲ್ಲಿ ಇಂದು ಯುಎಇ ವಿರುದ್ಧ ಮೊದಲ ಪಂದ್ಯವಾಡಿದ ಟೀಂ ಇಂಡಿಯಾ ಎದುರಾಳಿ ನೀಡಿದ 58 ರನ್ ಗಳ ಸುಲಭ ಗುರಿಯನ್ನು ನಾಲ್ಕೇ ಓವರ್ ಗಳಲ್ಲಿ ಟೀಂ ಇಂಡಿಯಾ ಚಚ್ಚಿ ಬಿಸಾಕಿದೆ.
ಇಂದು ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭದಲ್ಲಿ ಯುಎಇ ಬ್ಯಾಟಿಂಗ್ ಉತ್ತಮವಾಗಿಯೇ ಇತ್ತು. ಒಂದು ಹಂತದಲ್ಲಿ 47 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ 10 ರನ್ ಗಳಿಸುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತು.
ಭಾರತದ ಪರ ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಕಬಳಿಸಿ ಯುಎಇ ತಲೆ ಕತ್ತರಿಸಿದರೆ ಕುಲದೀಪ್ ಯಾದವ್ 4, ಶಿವಂ ದುಬೆ 3 ವಿಕೆಟ್ ಕಬಳಿಸಿ ಬಾಲ ಕತ್ತರಿಸಿದರು. ಅಲ್ಲಿಗೆ ಯುಎಇ 13.1 ಓವರ್ ಗಳಲ್ಲಿ ಕೇವಲ 57 ರನ್ ಗಳಿಗೆ ಆಲೌಟ್ ಆಯಿತು.
ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ಅಭಿಷೇಕ್ ಶರ್ಮಾ-ಗಿಲ್ ಸ್ಪೋಟಕ ಆರಂಭ ನೀಡಿದರು. ಅಭಿಷೇಕ್ ಶರ್ಮಾ 16 ಎಸೆತಗಳಿಂದ 30 ರನ್ ಗಳಿಸಿ ಔಟಾದರೆ ಗಿಲ್ 9 ಎಸೆತಗಳಿಂದ 20 ರನ್ ಮತ್ತು ಸೂರ್ಯಕುಮಾರ್ ಯಾದವ್ ಬಂದ ಬಾಲ್ ಗೇ ಸಿಕ್ಸರ್ ಸೇರಿದಂತೆ 7 ರನ್ ಗಳಿಸಿದರು. ಇದರೊಂದಿಗೆ ಭಾರತ 4.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.