ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ನಾಳೆ ಜನ್ಮದಿನದ ಸಂಭ್ರಮ. ದೀಪಿಕಾ ಮೂಲ ಊರು ಯಾವುದು ಎಂಬ ಬಗ್ಗೆ ಇಲ್ಲಿದೆ ಡೀಟೈಲ್ಸ್.
ಎಲ್ಲರಿಗೂ ಗೊತ್ತಿರುವ ಹಾಗೇ ದೀಪಿಕಾ ಮೂಲತಃ ಕನ್ನಡತಿ. ಅವರು ಮೊದಲು ಬಣ್ಣ ಹಚ್ಚಿದ್ದೂ ಕನ್ನಡ ಸಿನಿಮಾ ಮೂಲಕವೇ. ಇದಕ್ಕೆ ಮೊದಲು ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ಉಪೇಂದ್ರ ನಾಯಕರಾಗಿದ್ದ ಇಂದ್ರಜಿತ್ ಲಂಕೇಶ್ ನಿರ್ದೇಶನದ ಐಶ್ವರ್ಯಾ ಸಿನಿಮಾ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅದಾದ ಬಳಿಕ ಬಾಲಿವುಡ್ ಗೆ ಹಾರಿದವರು ತಿರುಗಿ ನೋಡಲೇ ಇಲ್ಲ. ಈಗ ಬಾಲಿವುಡ್ ನ ನಂ.1 ನಟಿಯಾಗಿದ್ದಾರೆ.
ದೀಪಿಕಾ ತಂದೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮೂಲತಃ ಉಡುಪಿಯ ಪಡುಕೋಣೆಯವರು. ಆದರೆ ಪ್ರಕಾಶ್ ತಮ್ಮ ವೃತ್ತಿ ಬದುಕಿಗಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ದೀಪಿಕಾ ಕೂಡಾ ಜನಿಸಿದ್ದು ಬೆಂಗಳೂರಿನಲ್ಲಿ. ಆದರೆ ತಮ್ಮ ಮೂಲ ಊರಿನ ಹೆಸರನ್ನು ಈಗಲೂ ಇಟ್ಟುಕೊಂಡಿದ್ದಾರೆ. ಹೀಗಾಗಿಯೇ ಅವರ ಹೆಸರಿನ ಮುಂದೆ ಪಡುಕೋಣೆ ಎಂದು ಬಂದಿದೆ. ಅದೀಗ ಬಾಲಿವುಡ್ಡಿಗರ ಬಾಯಲ್ಲ ಪಡುಕೋಣ್ ಎಂದೂ ಆಗಿದೆ ಬಿಡಿ.
ಆದರೆ ಈಗಲೂ ದೀಪಿಕಾ ಕರ್ನಾಟಕದ ನಂಟು ಬಿಟ್ಟಿಲ್ಲ. ಹಲವು ಕಾರ್ಯಕ್ರಮಗಳಲ್ಲಿ ಇಲ್ಲಿನ ತಿಂಡಿ, ತಿನಿಸುಗಳ ಬಗೆಗೆ ತಮಗಿರುವ ಪ್ರೀತಿ ಹಂಚಿಕೊಂಡಿದ್ದು ಇದೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿರುತ್ತಾರೆ. ರಣವೀರ್ ಸಿಂಗ್ ಕೈ ಹಿಡಿದಿರುವ ದೀಪಿಕಾ ನಾಳೆ 39 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.