Publish Date: Tue, 15 Oct 2024 (08:42 IST)
Updated Date: Tue, 15 Oct 2024 (08:44 IST)
ಬೆಂಗಳೂರು: ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಮಂಗಳವಾರ ಕೆಲವೊಂದು ಶುಭ ಕೆಲಸಗಳನ್ನು ಮಾಡುವುದಕ್ಕೆ ಅಷ್ಟು ಯೋಗ್ಯವಾದ ದಿನವಲ್ಲ. ಈ ದಿನ ಕೆಲವೊಂದು ವಸ್ತುಗಳನ್ನು ಮನೆಗೆ ತರುವುದು ಅಷ್ಟು ಶುಭವಲ್ಲ ಎಂಬ ನಂಬಿಕೆಯಿದೆ.
ಹಿಂದೂ ಧರ್ಮದಲ್ಲಿ ಒಂದೊಂದು ದಿನವೂ ಒಬ್ಬೊಬ್ಬ ದೇವರಿಗೆ ಅರ್ಪಿತವಾಗಿದೆ. ಮಂಗಳವಾರದ ಗ್ರಹ ಕುಜ. ಈ ದಿನ ದುರ್ಗಾ ದೇವಿ ಮತ್ತು ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಲಾಗುತ್ತದೆ. ಕುಜ ಎಂದರೆ ತೀವ್ರತರದ ಸ್ವಭಾವದ ಗ್ರಹವಾಗಿದೆ. ಈ ದಿನ ಕೆಲವೊಂದು ಶುಭ ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ.
ಅದೇ ರೀತಿ ಮನೆಗೆ ಈ ದಿನ ಹೊಸ ಬಟ್ಟೆ ಅಥವಾ ವಸ್ತುಗಳನ್ನು ಖರೀದಿಸಿ ತರುವುದು ಶುಭದಾಯಕವಲ್ಲ. ಈ ದಿನ ಹೊಸ ಬಟ್ಟೆ ಖರೀದಿಸಿ ತಂದರೆ ಅದು ನಷ್ಟವಾಗುವ ಭೀತಿಯಿದೆ. ಇಂದು ಮಂಗಳ ಗ್ರಹದ ದಿನವಾಗಿರುವುದರಿಂದ ಕಬ್ಬಿಣ ವಸ್ತು ಅಥವಾ ಕಪ್ಪು ವಸ್ತುಗಳನ್ನು ಮನೆಗೆ ಖರೀದಿಸಿ ತರಬೇಡಿ.
ಅದೇ ರೀತಿ ಮನೆಗೆ ಇಂದು ಗಾಜಿನ ವಸ್ತು ಖರೀದಿಸಿ ತರುವುದರಿಂದ ಹಣಕಾಸಿನ ನಷ್ಟವುಂಟಾಗಬಹುದು. ಇಲ್ಲವೇ ಮನೆಯಲ್ಲಿ ಅಶಾಂತಿ, ಕಲಹವಾಗುವ ಸಾಧ್ಯತೆಯಿದೆ. ಅದೇ ರೀತಿ ಮಹಿಳೆಯರು ಶೃಂಗಾರದ ವಸ್ತುಗಳನ್ನು ಖರೀದಿಸಲು ಇಂದು ಯೋಗ್ಯ ದಿನವಲ್ಲ. ಇದರಿಂದ ದಾಂಪತ್ಯದಲ್ಲಿ ವಿರಸ, ಕಲಹವಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ.