ಬೆಂಗಳೂರು: ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕಣ್ಣೀರು ಹಾಕಿಸಬೇಡಿ ಎನ್ನುತ್ತಾರೆ. ಯಾಕೆಂದರೆ ಹೆಣ್ಣು ದೇವತೆಯ ಸಮಾನ. ಆದರೆ ಆಕೆ ಶಾಪ ಹಾಕಿದರೆ ಅದರ ಪರಿಣಾಮ ತಲೆತಲಾಂತರದವರೆಗೂ ಅನುಭವಿಸಬೇಕಾಗುತ್ತದೆ.
ಹೆಣ್ಣು ಕ್ಷಮಯಾಧರಿತ್ರಿ. ಆಕೆ ಎಲ್ಲವನ್ನೂ ಸಹಿಸಿಕೊಂಡು ಮನೆಯನ್ನು ನಿಭಾಯಿಸಿಕೊಂಡು ಹೋಗುವ ತಾಯಿ. ಆದರೆ ಆಕೆಯ ಕಣ್ಣಲ್ಲಿ ಯಾವತ್ತೂ ನೀರು ಹಾಕಿಸಬಾರದು. ಆಕೆ ಗೋಳಾಡುವಂತೆ ಮಾಡಬಾರದು ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಇದಕ್ಕೆ ಕಾರಣವೂ ಇದೆ.
ಯಾಕೆಂದರೆ ಒಂದು ಹೆಣ್ಣಿಗೆ ನಮ್ಮಿಂದ ಅನ್ಯಾಯವಾಗಿ ಆಕೆ ಕಣ್ಣೀರಿಟ್ಟು ಶಾಪ ಹಾಕಿದರೆ ಅದರ ಪರಿಣಾಮ ಘೋರವಾಗಿರುತ್ತದೆ ಎಂಬ ನಂಬಿಕೆಯಿದೆ. ಹೆಣ್ಣಿನಲ್ಲಿ ಲಕ್ಷ್ಮೀ, ಭೂಮಿ, ಸಮೃದ್ಧಿ ಎಲ್ಲವನ್ನೂ ನೋಡುತ್ತೇವೆ. ಆದರೆ ಆಕೆ ಶಾಪ ಹಾಕಿದರೆ ಅದು ಮುಂದಿನ ತಲೆಮಾರಿನವರೆಗೂ ತಟ್ಟುತ್ತದೆ.
ಇದಕ್ಕೆ ನಮ್ಮ ಇತಿಹಾಸ, ಪುರಾಣ ಕತೆಗಳೇ ಉದಾಹರಣೆ. ದ್ರೌಪದಿಯ ಶಾಪ, ಸೀತೆಯ ಶಾಪ ಅಷ್ಟೇ ಏಕೆ ಮೈಸೂರು ರಾಜವಂಶಸ್ಥರು ಹೆಣ್ಣಿನ ಶಾಪದ ಪರಿಣಾಮವನ್ನು ಯಾವ ರೀತಿ ಅನುಭವಿಸಬೇಕಾಯಿತು ಎಂದು ನೋಡಿದ್ದೇವೆ. ಸ್ತ್ರೀ ಶಾಪ ಅತ್ಯಂತ ಕೆಟ್ಟದ್ದಾಗಿದ್ದು ಇದರಿಂದ ಮಕ್ಕಳಾಗದೇ ಇರುವುದು, ವಿವಾಹಕ್ಕೆ ತೊಂದರೆ, ಆಸ್ತಿ, ಪಾಸ್ತಿ ಹಾನಿ, ಸಮೃದ್ಧಿಯ ಕೊರತೆ, ಆರೋಗ್ಯ ಸಮಸ್ಯೆಗಳು ಇತ್ಯಾದಿ ಕಾಡಬಹುದು. ಹೀಗಾಗಿ ಯಾವುದೇ ಸ್ತ್ರೀಯರನ್ನು ಗೌರವದಿಂದ ಕಾಣಿರಿ.