Select Your Language

Notifications

webdunia
webdunia
webdunia
webdunia

ನಾಳೆ ಗೌರಿ ಹಬ್ಬ, ಸ್ವರ್ಣಗೌರಿ ವ್ರತದ ಮಹತ್ವವೇನು?

ನಾಳೆ ಗೌರಿ ಹಬ್ಬ, ಸ್ವರ್ಣಗೌರಿ ವ್ರತದ ಮಹತ್ವವೇನು?
ಬೆಂಗಳೂರು , ಬುಧವಾರ, 8 ಸೆಪ್ಟಂಬರ್ 2021 (10:30 IST)
Significance of Gowri Festival: ಗೌರಿ ಹಬ್ಬವನ್ನು ಸಾಮಾನ್ಯವಾಗಿ ಹೆಣ್ಣುಮಕ್ಕಳೇ ಆಚರಿಸುವುದು ಹೌದಾದರೂ ಹಿಂದೆ ಪುರುಷರೂ ಆಚರಿಸುತ್ತಿದ್ರಂತೆ. ಗಣಪತಿಯ ತಾಯಿ ಗೌರಿಯನ್ನು ನಾಳೆ ಪೂಜಿಸಿ ಭೂಮಿಯ ಮೇಲೆ ಕರೆದು ಸಂಭ್ರಮಪಟ್ಟರೆ, ತಾಯಿಯನ್ನು ಹುಡುಕುತ್ತಾ ಮಗ ಗಣಪ ಕೂಡಾ ಮಾರನೆಯ ದಿನ ತಪ್ಪದೇ ಬರುತ್ತಾನೆ ಎನ್ನುವ ನಂಬಿಕೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವರ್ಣಗೌರಿ ವ್ರತದ ಆಚರಣೆ ಹೇಗೆ, ಯಾಕೆ ಮಾಡಬೇಕು ಎನ್ನುವುದರ ಪೂರ್ಣ ವಿವರ ಇಲ್ಲಿದೆ.

Gowri Habba: ಶ್ರುಣು ರಾಜನ್ ಪ್ರವಕ್ಷಾಮೋ ನಭಃ ಶುಕ್ಲೇ ತೃತೀಯಕೇ|
ಆರಬ್ಧವ್ಯಂ ವ್ರತಮಿದಂ ಗೌರ್ಯಾಃ ಷೋಡಶ ವತ್ಸರಾನ್|| ಪ್ರಾಚೀನ ಕಾಲದಲ್ಲಿ "ವಿಮಲಾ" ಎಂಬ ನಗರವನ್ನು ಆಳುತ್ತಿದ್ದ ಚಂದ್ರಪ್ರಭನೆಂಬ ರಾಜನು ಬೇಟೆಗಾಗಿ ಅರಣ್ಯಕ್ಕೆ ಹೋದಾಗ ಅಲ್ಲಿ ಸುಂದರ ಸರೋವರದ ತೀರದಲ್ಲಿ ಸ್ವರ್ಣಗೌರೀ ವ್ರತವನ್ನು ಆಚರಿಸುತ್ತಿದ್ದ ಅಪ್ಸರಸ್ತ್ರೀಯರನ್ನು ಇದಾವ ವ್ರತವೆಂದು ಕೇಳಿದಾಗ ಆ ಸ್ತ್ರೀಯರಿತ್ತ ಉತ್ತರ ಈ ಶ್ಲೋಕ. "ಭಾದ್ರಪದ ಶುಕ್ಲದ ತದಿಗೆಯಂದು ಆರಂಭಿಸಿ ಹದಿನಾರು ಗ್ರಂಥಿಯುಳ್ಳ ದಾರದ ಜೊತೆಗೆ ಕಲಶವನ್ನು ವಿಧಿವತ್ತಾಗಿ ಸ್ಥಾಪಿಸಿ ಗೌರಿಯನ್ನು ಹದಿನಾರು ಉಪಚಾರಗಳಿಂದ ಪೂಜಿಸಿ ಹದಿನಾರು ಬಾಗಿನಗಳನ್ನು ಸುವಾಸಿನಿಯರಿಗೆ ನೀಡಿ ಹದಿನಾರು ವರ್ಷಕಾಲ ಈ ವ್ರತವನ್ನು ಆಚರಿಸಿ ಉದ್ಯಾಪನೆ ಮಾಡಿದರೆ ಸಕಲ ಸಂಪತ್ತುಗಳೂ ಉಂಟಾಗುತ್ತವೆ" ಎಂದು ಸಂಕ್ಷೇಪವಾಗಿ ವ್ರತದ ಮಹಿಮೆಯನ್ನು ರಾಜನಿಗೆ ಅಪ್ಸರೆಯರು ತಿಳಿಸುತ್ತಾರೆ. ರಾಜನು ಅವರ ಮಾತನ್ನು ಕೇಳಿ ವ್ರತವನ್ನು ಮಾಡಿ ಪವಿತ್ರ ದಾರವನ್ನು ಧರಿಸಿ ತನ್ನ ಪಟ್ಟಣಕ್ಕೆ ಹೋದನು.
ದೊರೆಯ ಮೊದಲ ಪತ್ನಿ 'ಮಹಾದೇವಿ'ಯು ದುರಹಂಕಾರದಿಂದ ರಾಜನ ತೋಳಿನ ದಾರವನ್ನು ಕಿತ್ತು ಬಿಸುಟಳು. ಅದು ಒಣಗಿದ ಮರದ ಮೇಲೆ ಬಿದ್ದಾಗ ಅದರ ಮಹಿಮೆಯಿಂದ ಮರ ಚಿಗುರಿದ್ದನ್ನು ಕಂಡು ಕಿರಿಯ ಪತ್ನಿ 'ಬಲಾ' ಎನ್ನುವವಳು ಆ ದಾರವನ್ನು ತಾನು ಧರಿಸಿದಳು. ಆ ಪವಿತ್ರ ದಾರದ ಬಲದಿಂದ ಅವಳು ರಾಜನಿಗೆ ಪ್ರೀತಿಪಾತ್ರಳಾದಳು. ಮೊದಲ ಪತ್ನಿಯು ಮಾನಸಿಕ ಕ್ಲೇಶಕ್ಕೆ ಒಳಗಾಗಿ ಕಾಡಿನಲ್ಲಿ ಅಲೆಯುತ್ತಾ ಅಲ್ಲಿ ಋಷಿಗಳನ್ನು ಕಂಡು ಅವರ ಸಹಾಯದಿಂದ ಗೌರಿಯನ್ನು ಆರಾಧಿಸಿ ಕ್ಲೇಶದೋಷಗಳನ್ನು ಕಳೆದುಕೊಂಡು ಪುನಃ ಅರಮನೆಗೆ ಬಂದು ರಾಜನೊಂದಿಗೆ ವ್ರತವನ್ನು ಆಚರಿಸಿದಳು. ಅನೇಕ ವರ್ಷ ಸುಖ ಸಮೃದ್ಧಿಯಿಂದ ಪ್ರಜೆಗಳನ್ನು ಪಾಲಿಸಿ ರಾಜನು ಇಬ್ಬರೂ ಪತ್ನಿಯರೊಡನೆ ಸ್ವರ್ಗವನ್ನು ಸೇರಿದನು.
ಈ ಕಥೆಯು ಶ್ರೀಸ್ಕಾಂದಪುರಾಣದಲ್ಲಿ ಭಗವಾನ್ ಶಿವನು ಪುತ್ರನಾದ ಸ್ಕಂದನಿಗೆ ಹೇಳಿದನೆಂದೂ ಈ ವ್ರತದ ಉದ್ಯಾಪನೆಯ ವಿಧಾನವನ್ನು ಶ್ರೀಕೃಷ್ಣಪರಮಾತ್ಮನು ಯುಧಿಷ್ಠಿರನಿಗೆ ಉಪದೇಶಿಸಿದನೆಂದೂ ಉಲ್ಲೇಖವಿದೆ. ವಿಶೇಷವಾಗಿ ಸೌಮಂಗಲ್ಯವನ್ನು ಅಪೇಕ್ಷಿಸುವ ಈ ವ್ರತವನ್ನು ಗಂಡಸರು ಮಾಡಬಹುದಾದರೂ ಹೆಚ್ಚಾಗಿ ಸ್ತ್ರೀಯರೇ ಆಚರಿಸುವ ಪದ್ಧತಿ ಬೆಳೆದುಬಂದಿದೆ.
ಹಬ್ಬದ ಜೊತೆ ತವರಿನ ಸಡಗರ
ಶ್ರಾವಣ ಮಾಸದಲ್ಲಿ ತವರಿನಿಂದ ಅರಶಿನ-ಕುಂಕುಮ ಹೊತ್ತ ಸಂಬಂಧಿಗಳು ಬರುವುದೂ ಪುನಃ ವ್ರತವನ್ನು ಆಚರಿಸಿದ ನಂತರ ತವರಿಗೆ ತಾಯಿಬಾಗಿನವನ್ನು ಕೊಡಲು ಹೆಣ್ಣುಮಕ್ಕಳು ಹೋಗುವುದೂ ಆ ಮೂಲಕ ಸಂಬಂಧವನ್ನು ಹಾರ್ದಿಕವಾಗಿ ಇಡುವುದೂ ಸಂಪ್ರದಾಯವಾಗಿದೆ.
ಮಳೆಗಾಲದ ಅಬ್ಬರ ಸ್ವಲ್ಪ ಕಡಿಮೆಯಾಗಿ ಹೂವು ಅರಳುವ ಸಂಭ್ರಮದ ಕಾಲದಲ್ಲಿ ಹದಿನಾರು ತರದ ಪತ್ರೆಗಳನ್ನೂ , ಹದಿನಾರು ತರದ ಹೂಗಳನ್ನೂ , ಪೂಜಾಸಾಮಗ್ರಿಗಳನ್ನು ಹೊಂದಿಸುವುದೇ ಸಂಭ್ರಮ. ಈ ಗೌರಿ ಹಬ್ಬಕ್ಕೆಂದೇ ವಿಶೇಷವಾಗಿ ಹದಿನಾರು ಎಳೆಯ ಹತ್ತಿಯ ಗೆಜ್ಜೆವಸ್ತ್ರಗಳನ್ನು ರಚಿಸುವ ಕ್ರಮವಿದ್ದು ಅದರಲ್ಲಿ ನಾನಾ ವಿನ್ಯಾಸಗಳನ್ನು ಮಾಡುವ ಕೌಶಲವೂ ಸೇರಿ ಅದೊಂದು ಕಲಾಪ್ರಕಾರವಾಗಿಯೇ ಬೆಳೆದಿದೆ.
ಮಾರನೇ ದಿನವೇ ನೈವೇದ್ಯಪ್ರಿಯನಾದ ಗೌರಿಯ ಮಗ ಗಣಪತಿಯ ವ್ರತವೂ ಆಚರಿಸುವುದರಿಂದ ಚಕ್ಕುಲಿ, ಕರಿಗಡುಬು, ಮೋದಕ, ಕೊಟ್ಟೆಕಡುಬು ಇತ್ಯಾದಿ ನಾನಾವಿಧ ಭಕ್ಷ್ಯಗಳ ತಯಾರಿ ಮತ್ತು ಪ್ರಸಾದವನ್ನು ಸವಿಯುವ ಸಂಭ್ರಮಕ್ಕೆ ಎಲ್ಲರೂ ಸೇರುತ್ತಾರೆ. ಗಣಪತಿಗೆ ಗರಿಕೆಯನ್ನು ಅರ್ಪಿಸಲಂತೂ ಮಕ್ಕಳಲ್ಲಿ ಸ್ಪರ್ಧೆಯೇ ಏರ್ಪಡುವ ಕಾಲವಿತ್ತು!
ಬಾಗಿನದ ಮಹತ್ವ
ವ್ರತದ ಮಹತ್ವದ ಅಂಶಗಳಲ್ಲಿ "ಉಪಾಯನದಾನ"ವೂ ಒಂದು. ಅಕ್ಕಿ,ತೆಂಗಿನಕಾಯಿ, ಕಡಲೆ, ಹಣ್ಣು,ತಾಂಬೂಲ, ಬಳೆ, ಬಾಚಣಿಗೆ, ವಸ್ತ್ರ, ಅರಶಿನ ಕುಂಕುಮ, ಕಾಡಿಗೆ ಇತ್ಯಾದಿ ಮಂಗಲದ್ರವ್ಯಗಳನ್ನು ಅರ್ಹರಿಗೆ ಕೊಡುವುದರಿಂದ ಕಷ್ಟದಲ್ಲಿರುವವರ ಬದುಕಿನ ನಿರ್ವಹಣೆಗೂ ಸಹಾಯವಾಗುವುದಲ್ಲದೆ ಪೂಜಿಸಿಯೇ ಕೊಡಬೇಕಾದ್ದರಿಂದ ಅಹಂಕಾರ ನಿರ್ಮೂಲನೆಯೂ ಆಗುತ್ತದೆ.
ಹಬ್ಬಗಳ ಮೂಲ ಉದ್ದೇಶವೇ ಸಮಾಜದ ಸ್ವಾಸ್ಥ್ಯ
ಶ್ರದ್ಧಾ ಭಕ್ತಿಯಿಂದ ಹಬ್ಬಗಳನ್ನು ಆಚರಿಸಿ ದೇಶವು ಸುಭಿಕ್ಷವಾಗಲೆಂದು ,ಸೌಮನಸ್ಯ ಸಿದ್ಧಿಸಲೆಂದು ,ಈತಿಬಾಧೆಗಳು ನಿವಾರಣೆಯಾಗಲೆಂದು ಆ ದೇವಿಯನ್ನು ಪ್ರಾರ್ಥಿಸೋಣ.
ಜಯದೇವಿ ನಮಸ್ತುಭ್ಯಂ ಜಯಭಕ್ತ ವರಪ್ರದೇ|
ಜಯ ಶಂಕರವಾಮಾಂಗೇ ಮಂಗಲೇ ಸರ್ವಮಂಗಲೇ||


Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ನಮಸ್ಕಾರ ಮಾಡಿ ದೇಹದ ತೂಕ ಇಳಿಸಿ..!