Publish Date: Sat, 09 Feb 2019 (17:03 IST)
Updated Date: Sat, 09 Feb 2019 (17:14 IST)
ಉಡುಪಿ: ಎಲ್ಲಿರುವೆ ಮನವ ಕಾಡುವ ರೂಪಸಿಯೇ…ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ ...
ಬಯಲುದಾರಿ ಸಿನಿಮಾನದ ಈ ಹಾಡು ಪ್ರತಿ ಪ್ರೇಮಿಗಳ ದಿನಕ್ಕೂ ಮೊದಲೆ ನನಗಾಗಿಯೇ ಸಿದ್ಧಗೊಂಡಿರಬಹುದ ಎಂದು ಎಣಿಸುವುದು ನನಗೆ ಮಾತ್ರಾನಾ ?
ಅದೆಷ್ಟೋ ವರುಷಗಳು ಸಂದವು ನನ್ನವಳ ಬರುವಿಕೆಗಾಗಿ ಕಾದು!!
ಇಂದಲ್ಲ ನಾಳೆ ಬಂದೆ ಬರುವಳು ಎನ್ನುವ ಆ ಹೊಂಗನಸಿನ ಗೋಪುರ ಇಂದು ಕೂಡ ಕಳೆಗಟ್ಟಿ ನಿಂತಿದೆ.
ಗೆಳತಿ ಎಲ್ಲಿರುವೆ...
ಈ ಒಡಲಾಳದಲ್ಲಿ ನಿನಗೆಂದೆ ಅದೆಷ್ಟೋ ಅಕ್ಕರೆಯನ್ನು ಕೂಡಿಟ್ಟಿರುವೆ. ಮನಸ್ಸಿನ ಬಯಕೆಗಳನ್ನೆಲ್ಲಾ ಬತ್ತದಂತೆ ನಿನಗಾಗಿಯೇ ಕಾಪಿಟ್ಟಿರುವೆ.ಯಾರೊಂದಿಗೂ ಹಂಚಿಕೊಳ್ಳಲಾಗದ ಭಾವನೆಗಳು ನಿನ್ನ ಬರುವಿಕೆಗೆ ಕಾತುರವಾಗಿವೆ.
ಗೆಳತಿ ನಿನಗೆ ಗೊತ್ತಾ..
ನನ್ನ ಮನದಾಳದ ಕಲ್ಪನೆಯ ಕೂಸು ನೀನು.ಅಲ್ಲಿ ನಿನಗೊಂದು ಕಾಲ್ಪನಿಕ ರೂಪವಿದೆ, ನನ್ನದೆ ಆದ ನಿನಗೊಂದು ಹೆಸರಿದೆ.ಮನಸ್ಸಿನ ತುಂಬಾ ನಿನ್ನದೆ ನಗುವಿನ ಕಲರವವಿದೆ.ನಿನ್ನ ಸ್ಪರ್ಶದ ಕಚಗುಳಿಯ ಹಿತವಿದೆ.ಆ ಮುದ್ದಾಟಕೂ ಮಿತಿಮೀರಿದ ಸರಸವಿದೆ.ಕೋಪ-ಸಿಟ್ಟಿನ ವಿರಸವಿದೆ.
ಗೆಳತಿ...
ನೀನು ಜಗದೇಕ ಸುಂದರಿಯಾಗಬೇಕೆಂದೆನಿಲ್ಲ.ನಮ್ಮ ಬಾಳಿನ ಸುಂದರ ನಾಳೆಗೆ ನೀನು ಸಾಕ್ಷಿಯಾಗಬೇಕು.
ನೀನು ಹಣ-ಆಸ್ತಿಯಲ್ಲಿ ಸಿರಿವಂತಳಾಗಬೇಕೆಂದೆನಿಲ್ಲ.ನಮ್ಮ ಬದುಕಿನ ಸುಖದ ಸಿರಿಯ ಪಾಲುದಾರಳಾಗಿರಬೇಕು.
ಸಿಡುಕಿ-ಹಟಮಾರಿಯಾಗಿದ್ದರು ಪರವಾಗಿಲ್ಲ.ಸಿಡುಕಿನಲ್ಲಿರುವ ಪ್ರೀತಿ, ಹಟದಲ್ಲಿರುವ ಮುಗ್ದತೆ ನನಗಷ್ಟೇ ಸೀಮಿತವಾಗಿರಬೇಕು.
ಇನ್ನು ಯಾಕೆ ಈ ಸತಾಯಿಸುವಿಕೆ ? ಕಾದಿರುವೆ ನಿನ್ನ ಬರುವಿಕೆಗಾಗಿ ಈ ಪ್ರೇಮಿಗಳ ದಿನ ನಮ್ಮ ಪ್ರೀತಿಯ ಮಿಲನವಾಗಿ ಹೊಸ ಪ್ರೇಮಕಾವ್ಯ ಜನ್ಮ ತಳೆಯಲಿ.
ಬರುವೆಯಲ್ಲ ಗೆಳತಿ..?
ಕಾಯುತ್ತಿರುವೆ
Samartha shetty yadthady