ಕಾರವಾರ (ಸೆ. 4): ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಕರಾವಳಿಯಲ್ಲಿ ಗಣೇಶನ ಹಬ್ಬವನ್ನ ಹಿಂದಿನಿಂದಲೂ ಮಹಾರಾಷ್ಟ್ರ ಭಾಗದಲ್ಲಿ ನಡೆಯುವಂತೆ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ ವರ್ಷ ಗಣೇಶೋತ್ಸವಕ್ಕೆ ಕೊರೊನಾ ತನ್ನ ಕರಿನೆರಳನ್ನು ಬೀರಿದ್ದು, ಈ ಬಾರಿಯೂ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಕುರಿತು ಸಮರ್ಪಕ ಆದೇಶ ಹೊರಡಿಸದಿರುವುದು ಮೂರ್ತಿ ತಯಾರಕರಿಗೆ ಸಂಕಷ್ಟ ತಂದೊಡ್ಡಿದೆ.
ಗಣೇಶ ಚತುರ್ಥಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅದ್ದೂರಿಯಾಗಿ ಆಚರಿಸುವ ಹಬ್ಬಗಳಲ್ಲೊಂದು. ಅದರಲ್ಲೂ ಜಿಲ್ಲೆಯ ಕರಾವಳಿಯಲ್ಲಿ ಹಬ್ಬಕ್ಕೂ ಎರಡು ತಿಂಗಳ ಮೊದಲೇ ಮೂರ್ತಿ ತಯಾರಿಕೆ ಕೆಲಸ ಪ್ರಾರಂಭಿಸುವ ಕಲಾವಿದರು ಜನರ ಬೇಡಿಕೆಯಂತೆ ಭಿನ್ನ ವಿಭಿನ್ನ ಮೂರ್ತಿಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿಯೂ ಸಹ ವಿಘ್ನನಿವಾರಕನಿಗೆ ಕೊರೊನಾ ಅಬ್ಬರ ಅಡ್ಡಿಯಾಗಿದ್ದು ಮೂರ್ತಿಕಾರರಿಗೆ ಸಂಕಷ್ಟ ತಂದೊಡ್ಡಿದೆ. ಕಾರವಾರ ನಗರದಲ್ಲಿ ಹಲವಾರು ಮಂದಿ ಕಲಾವಿದರು ಪ್ರತಿ ವರ್ಷ ಚತುರ್ಥಿ ಸಂದರ್ಭದಲ್ಲಿ ನೂರಾರು ಗಣೇಶನ ಮೂರ್ತಿಗಳನ್ನ ತಯಾರು ಮಾಡುತ್ತಿದ್ದರು. ಅದರಲ್ಲೂ ಸಾರ್ವಜನಿಕವಾಗಿ ಸ್ಥಾಪಿಸಲಾಗುವ ಭಿನ್ನ ವಿಭಿನ್ನ ಬಗೆಯ ಮೂರ್ತಿಗಳ ತಯಾರಿಕೆಗೆ ಹೆಚ್ಚು ಸಮಯ ಬೇಕಾಗಿದ್ದು ಮೊದಲೇ ಬೇಡಿಕೆಗಳು ಬರುತ್ತಿದ್ದವು.
ಆದರೆ ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಸಾರ್ವಜನಿಕ ಗಣೇಶೋತ್ಸವ ತನ್ನ ಅದ್ದೂರಿತನವನ್ನ ಕಳೆದುಕೊಂಡಿದೆ. ದೊಡ್ಡ ಪ್ರಮಾಣದ ಮೂರ್ತಿಗಳಿಗೆ ಬೇಡಿಕೆಯೇ ಇಲ್ಲದಿರುವುದರಿಂದಾಗಿ ಮೂರ್ತಿ ತಯಾರಿಕೆಯನ್ನೇ ಅವಲಂಬಿಸಿದ್ದ ಕಲಾಕಾರರಿಗೆ ಇದು ಸಂಕಷ್ಟ ಉಂಟುಮಾಡಿದೆ. ಅಲ್ಲದೇ ಸರ್ಕಾರ ಇದುವರೆಗೂ ಸಾರ್ವಜನಿಕ ಗಣೇಶೋತ್ಸವ ನಡೆಸಲು ಸೂಕ್ತ ಮಾರ್ಗಸೂಚಿಗಳನ್ನ ನೀಡಿಲ್ಲವಾಗಿದ್ದು, ಇದರಿಂದ ಗಣೇಶ ಮೂರ್ತಿಗಳಿಗೆ ನಿಗದಿತ ಬೇಡಿಕೆಯೇ ಬಾರದೇ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಮೂರ್ತಿ ತಯಾರಕರು.
ಇನ್ನು ಜಿಲ್ಲೆಯ ಬಹುತೇಕ ಕಲಾವಿದರು ಮಣ್ಣಿನ ಮೂರ್ತಿಗಳನ್ನೇ ತಯಾರಿಸಿಕೊಂಡು ಬಂದಿದ್ದು ಮೂರ್ತಿಗಳು ತಯಾರಾಗಲು ಸಮಯಾವಕಾಶ ಬೇಕಾಗುತ್ತದೆ. ಅದರಲ್ಲೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಸಾರ್ವಜನಿಕ ಮೂರ್ತಿಗಳ ತಯಾರಿಕೆಗೆ ಕನಿಷ್ಠ ಒಂದರಿಂದ ಎರಡು ತಿಂಗಳ ಕಾಲಾವಕಾಶ ಬೇಕು. ಆದರೆ ಸರ್ಕಾರ ಇದುವರೆಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತು ಸ್ಪಷ್ಟ ನಿರ್ದೇಶನ ನೀಡಿಲ್ಲವಾಗಿದ್ದು ಕೊನೇ ಕ್ಷಣದಲ್ಲಿ ತೀರ್ಮಾನ ಪ್ರಕಟಿಸಿದಲ್ಲಿ ಯಾವುದೇ ಪ್ರಯೋಜನ ಇಲ್ಲದಂತಾಗಲಿದೆ. ಕಳೆದ ಬಾರಿ ಸಹ ಇದೇ ರೀತಿಯ ತಪ್ಪನ್ನ ಸರ್ಕಾರ ಮಾಡಿದ್ದು ಮೂರ್ತಿ ತಯಾರಕರು, ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಸಾಕಷ್ಟು ತೊಂದತೆ ಅನುಭವಿಸುವಂತಾಗಿತ್ತು. ಹೀಗಾಗಿ ಈ ಬಾರಿ ಮತ್ತದೇ ತಪ್ಪು ಮಾಡದಂತೆ ಆಯೋಜಕರು ಮನವಿ ಮಾಡಿದ್ದಾರೆ.
ಅಲ್ಲದೇ ಹಲವರು ಒಂದೂವರೆ ದಿನ ಮಾತ್ರ ಸಾರ್ವಜನಿಕ ಗಣೇಶೋತ್ಸವ ನಡೆಸಲು ತೀರ್ಮಾನಿಸಿದ್ದು ಸರ್ಕಾರ ಮಾತ್ರ ಇದುವರೆಗೆ ಯಾವುದೇ ನಿರ್ಧಾರ ಪ್ರಕಟಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನ ಕೇಳಿದ್ರೆ ಕೊರೊನಾ ಆತಂಕ ಇದುವರೆಗೂ ಇರುವ ಹಿನ್ನಲೆ ಸರಳವಾಗಿ ಕಳೆದಬಾರಿಯಂತರ ಗಣೇಶೋತ್ಸವ ಆಚರಣೆ ಅವಕಾಶ ಮಾಡಿಕೊಡಲಾಗುವುದು ಅಂತಾ ತಿಳಿಸಿದ್ದಾರೆ.
ಪಕ್ಷದ ಸಭೆ, ಕಾರ್ಯಕ್ರಮಗಳನ್ನ ಮಾತ್ರ ಮನಃಬಂದಂತೆ ನಡೆಸುವ ಸರ್ಕಾರ ಸಾರ್ವಜನಿಕ ಹಬ್ಬಗಳ ಆಚರಣೆ ಅಡ್ಡಿಪಡಿಸುತ್ತಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಹಬ್ಬದ ಆಚರಣೆಗೆ ಅವಕಾಶ ಮಾಡಿಕೊಡಬೇಕಿದೆ.