Select Your Language

Notifications

webdunia
webdunia
webdunia
webdunia

ಪ್ರಜಾಪ್ರಭುತ್ವದ ಕಾವಲುಗಾರರಿಗೆ ಯಾತನೆ ಸೃಷ್ಟಿಸಲಿದೆ ಎಂದ ಕೋರ್ಟ್

ಪ್ರಜಾಪ್ರಭುತ್ವದ ಕಾವಲುಗಾರರಿಗೆ ಯಾತನೆ ಸೃಷ್ಟಿಸಲಿದೆ ಎಂದ ಕೋರ್ಟ್
ಹೊಸದಿಲ್ಲಿ , ಶುಕ್ರವಾರ, 3 ಸೆಪ್ಟಂಬರ್ 2021 (15:19 IST)
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್ ಅವರ ಸಹೋದರ ಹಾಗೂ ಇತರ ಇಬ್ಬರನ್ನು ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಗುರುವಾರ ದಿಲ್ಲಿಯ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿದೆ.

ಈ ಸಂದರ್ಭ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ "ದೇಶ ವಿಭಜನೆಯ ನಂತರ ನಡೆದ ಅತ್ಯಂತ ಕೆಟ್ಟ ಮತೀಯ ಹಿಂಸಾಚಾರವನ್ನು ಇತಿಹಾಸ ಹಿಂದಿರುಗಿ ನೋಡಿದಾಗ, ಸೂಕ್ತ ತನಿಖೆ ನಡೆಸಲು ತನಿಖಾ ಏಜನ್ಸಿಯ ವೈಫಲ್ಯವು ಪ್ರಜಾಪ್ರಭುತ್ವದ ಕಾವಲುಗರರಿಗೆ ಖಂಡಿತವಾಗಿಯೂ ಯಾತನೆ ನೀಡಲಿದೆ,'' ಎಂದು ಹೇಳಿದೆ.
ತನಿಖೆಗೆ ಅಗತ್ಯ ಮೇಲ್ವಿಚಾರಣೆಯನ್ನು ಹಿರಿಯ ಅಧಿಕಾರಿಗಳು ನಡೆಸದೇ ಇರುವ ಬಗ್ಗೆ ಟೀಕಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್, ತನಿಖೆಯ ಕುರಿತು ಪ್ರಾಮಾಣಿಕ ಉದ್ದೇಶವಿಲ್ಲದೆ ತೆರಿಗೆದಾರರ ಹಣವನ್ನು ಪೋಲು ಮಾಡಿದ್ದಾರೆ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಖುಲಾಸೆಗೊಂಡವರಲ್ಲಿ ಹುಸೈನ್ ಅವರ ಸೋದರ ಶಾ ಆಲಂ ಹಾಗೂ ಶಾದಬ್ ಮತ್ತು ರಶೀದ್ ಸೈಫಿ ಸೇರಿದ್ದರು. ಫೆಬ್ರವರಿ 2020ರಲ್ಲಿ ದಿಲ್ಲಿಯ ಚಾಂದ್ ಬಾಘ್ ಪ್ರದೇಶದಲ್ಲಿ ಅಂಗಡಿಯೊಂದರಲ್ಲಿ ದಾಂಧಲೆಗೈದ ಪ್ರಕರಣದಲ್ಲಿ ಅವರು ಆರೋಪ ಎದುರಿಸುತ್ತಿದ್ದರು.
ದಿಲ್ಲಿ ಹಿಂಸಾಚಾರ ಕುರಿತ 750 ಪ್ರಕರಣಗಳಲ್ಲಿ ನ್ಯಾಯಾಲಯದ ಮುಂದೆ 150 ಪ್ರಕರಣಗಳಿವೆ ಹಾಗೂ ಇಲ್ಲಿಯ ತನಕ 35 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ವಿಚಾರಣೆ ಆರಂಭಗೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಹಲವಾರು ಆರೋಪಿಗಳು ಕಳೆದ ಒಂದೂವರೆ ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆಂಬುದನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
ಈ ನಿರ್ದಿಷ್ಟ ಪ್ರಕರಣದ ಬಗ್ಗೆ ಉಲ್ಲೇಖಿಸಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಪೊಲೀಸರು ಸಂತ್ರಸ್ತ, ಕಾನ್ಸ್ಟೇಬಲ್ ಗ್ಯಾನ್ ಸಿಂಗ್, ಕರ್ತವ್ಯನಿರತ ಅಧಿಕಾರಿ, ತನಿಖಾಧಿಕಾರಿ ಹಾಗೂ ಇನ್ನೊಬ್ಬ ಸೇರಿದಂತೆ ಐದು ಸಾಕ್ಷಿಗಳನ್ನು ಮಾತ್ರ ತೋರಿಸಿದ್ದಾರೆ. ದೂರುದಾರ ಎರಡು ದೂರುಗಳನ್ನು ನೀಡಿದ್ದರೂ ಮಾರ್ಚ್ 2ರ ತನಕ ತನಿಖಾ ಏಜನ್ಸಿ ಅದಕ್ಕೆ ಮಾತ್ರ ತಿಳಿದಿರಬಹುದಾದ ಕಾರಣದಿಂದ ತನಿಖೆ ಆರಂಭಿಸಿರಲಿಲ್ಲ ಎಂದು ಹೇಳಿದೆ. ಸುಮಾರು 100ಕ್ಕೂ ಅಧಿಕ ಮಂದಿಯಿದ್ದ ಗುಂಪು ಈ ಪ್ರಕರಣದ ಹಿಂದಿದ್ದರೂ ಪೊಲೀಸರು ಇಲ್ಲಿಯ ತನಕ ಕೇವಲ ಮೂವರನ್ನು ಬಂಧಿಸಿರುವುದನ್ನು ಗಮನಿಸಿದಾಗ ಅವರೆಷ್ಟು ಪ್ರಯತ್ನ ಪಟ್ಟಿರಬಹುದೆಂದು ತಿಳಿಯುತ್ತದೆ ಎಂದು ನ್ಯಾಯಾಲಯ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ಕ್ಕೆ ಮುಹೂರ್ತ ಫಿಕ್ಸ್!