ನವದೆಹಲಿ (ಆ. 5): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಯೋಜನೆಗೆ ತಮಿಳುನಾಡು ಇನ್ನೂ 100 ವರ್ಷವಾದರೂ ಒಪ್ಪಿಗೆ ಕೊಡುವುದಿಲ್ಲ. ಆದುದರಿಂದ ತಮಿಳುನಾಡು ಒಪ್ಪಿಗೆಗಾಗಿ ಕಾಯುವ ಬದಲು ರಾಜ್ಯ ಸರ್ಕಾರ ಶೀಘ್ರವೇ ಯೋಜನೆಯನ್ನು ಆರಂಭಿಸಬೇಕು. ಅಲ್ಲದೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಬೇಕಿರುವ ಅಗತ್ಯ ಒಪ್ಪಿಗೆಯನ್ನೂ ಪಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುವಾರ ನವದೆಹಲಿಯಲ್ಲಿ ಆಗ್ರಹ ಮಾಡಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನನಗೆ ಇರುವ ಮಾಹಿತಿಗಳ ಪ್ರಕಾರ ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ. ನಾವು ನಮ್ಮ ನೆಲದಲ್ಲಿ, ನಮ್ಮ ಹಣದಿಂದ ಮಾಡುತ್ತಿರುವ ಯೋಜನೆ ಇದು. ದಿನೇ ದಿನೇ ಯೋಜನಾ ವೆಚ್ಚ ಹೆಚ್ಚಾಗುತ್ತೆ. ಆದುದರಿಂದ ಕೂಡಲೇ ಯೋಜನೆಯನ್ನು ಆರಂಭಿಸಬೇಕು. ಇದಕ್ಕೆ ಕಾಂಗ್ರೆಸ್ ವತಿಯಿಂದ ಸಂಪೂರ್ಣ ಸಹಕಾರ ಇರಲಿದೆ. ಕೇಂದ್ರ ಸರ್ಕಾರದಿಂದ ಕೆಲವೊಂದು ಒಪ್ಪಿಗೆ ಪಡೆಯಬೇಕಿದ್ದರೆ ಅದನ್ನು ಪಡೆಯಲಿ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಬೆಂಗಳೂರು ಮನೆಯ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 'ಇದು ಒಂದು ರೀತಿಯ ಅರೆಸ್ ಮೆಂಟ್. ಜಮೀರ್ ಮನೆ ಮೇಲೆ ಐಟಿ ದಾಳಿ ಖಂಡನೀಯ.ಕಾನೂನು ಪ್ರಕಾರ ಈ ಪ್ರಕರಣ ಎದುರಿಸಲು ಅವರು ಸಿದ್ದರಿದ್ದಾರೆ. ಶ್ರೀನಿವಾಸಗೌಡ ಅವರು ವಿಧಾನಸೌಧದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ಅಶ್ವಥನಾರಾಯಣ ಮೇಲೆ 30 ಕೋಟಿ ರೂಪಾಯಿಗಳ ಆರೋಪ ಮಾಡಿದ್ದರು. ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರ ರಚನೆಗೆ 9 ಕೋಟಿ ಖರ್ಚು ಮಾಡಿರುವುದಾಗಿ ಹೇಳಿದ್ದರು. ಆರೋಪ ಮಾಡಿದ್ದಾಗ ಐಟಿ, ಇಡಿ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.
ಕಮಲ್ ನಾಥ್ - ಡಿ.ಕೆ. ಶಿವಕುಮಾರ್ ಭೇಟಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿ ಮಾಡಿ ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಕೋವಿಡ್ ದುಸ್ಥಿತಿ ಕುರಿತು ಚರ್ಚೆ ನಡೆಸಿದರು. ಕೋವಿಡ್ ಸಾವಿನ ಪ್ರಮಾಣ ಕುರಿತು ಸರ್ಕಾರಗಳು ಸುಳ್ಳು ಲೆಕ್ಕ ನೀಡುತ್ತಿವೆ. ಸರ್ಕಾರ ಹೇಳುತ್ತಿರುವ ಅಂಕಿ-ಅಂಶಕ್ಕೂ ಚಿತಾಗಾರದಲ್ಲಿ ಅಂತ್ಯಸಂಸ್ಕಾರಗೊಂಡ ಶವಗಳ ಸಂಖ್ಯೆಗೂ ಅಜಗಜಾಂತರವಿದೆ. ಕೋವಿಡ್ ನಿಂದ ಸತ್ತವರ ಮಾಹಿತಿಯನ್ನು ಸ್ಮಶಾನ, ಚಿತಾಗಾರಗಳಿಂದ ಪಡೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂಬ ಅಂಶವನ್ನು ಶಿವಕುಮಾರ್ ಅವರು ಗಮನಕ್ಕೆ ತಂದರು.
ಬೆಂಗಳೂರು ಹಾಗೂ ಕರ್ನಾಟಕ ಮೆಡಿಕಲ್ ಟೂರಿಸಂ, ಐಟಿ ಹಬ್ ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಆದರೆ ಬಿಜೆಪಿ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಜಾಗತಿಕ ಮಟ್ಟದಲ್ಲಿ ರಾಜ್ಯದ ಘನತೆ-ಗೌರವ ನಾಶವಾಗಿದೆ. ಕೆಲವು ದೇಶಗಳು ಇಲ್ಲಿಂದ ಹೋಗುವವರಿಗೆ ನಿರ್ಬಂಧ ಹೇರಿವೆ. ಇಲ್ಲಿನ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ಸಮಯದಲ್ಲಿ ಬಿಜೆಪಿಯ ಸ್ವಾರ್ಥ ರಾಜಕಾರಣ, ದುರಾಡಳಿತ, ಭ್ರಷ್ಟಾಚಾರದಿಂದ ರೈತರು, ಕಾರ್ಮಿಕರ ಬದುಕು ಬೀದಿಪಾಲಾಗಿದೆ. ಅವರಿಗೆ ಸರ್ಕಾರದಿಂದ ಸೂಕ್ತ ನೆರವು ಸಿಕ್ಕಿಲ್ಲ ಎಂದೂ ಹೇಳಿದರು. ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಕಾಂಗ್ರೆಸ್ ಯಾವ ರೀತಿ ಕಾರ್ಯಕ್ರಮ ವಿಸ್ತರಿಸಬಹುದು ಎಂಬ ವಿಚಾರವಾಗಿಯೂ ಉಭಯ ನಾಯಕರು ಚರ್ಚೆ ನಡೆಸಿದರು.