Select Your Language

Notifications

webdunia
webdunia
webdunia
webdunia

ಒಬಿಸಿ ಮಾನ್ಯತೆ ಅಧಿಕಾರ ರಾಜ್ಯಕ್ಕೆ ಸಿಕ್ಕರೆ ಭಾರೀ ಅನುಕೂಲ

ಒಬಿಸಿ ಮಾನ್ಯತೆ ಅಧಿಕಾರ ರಾಜ್ಯಕ್ಕೆ ಸಿಕ್ಕರೆ ಭಾರೀ ಅನುಕೂಲ
ಬೆಂಗಳೂರು , ಗುರುವಾರ, 5 ಆಗಸ್ಟ್ 2021 (08:33 IST)
ಬೆಂಗಳೂರು (ಆ.05):  ಒಬಿಸಿ ಮಾನ್ಯತೆ ನೀಡುವ ಅಧಿಕಾರ ರಾಜ್ಯಕ್ಕೆ ದೊರೆತಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯಗಳ ಒಳ ಪಂಗಡಗಳು ಸೇರಿದಂತೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವ ಆಗ್ರಹ ಮಂಡಿಸುತ್ತಿರುವ ಹಲವು ಜಾತಿಗಳ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ.

ಪಂಚಮಸಾಲಿ ಸೇರಿದಂತೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ವಿವಿಧ ಒಳಪಂಗಡಗಳು ಸೇರಿದಂತೆ ಹಲವು ಸಮುದಾಯಗಳು ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ತೀವ್ರವಾಗಿ ಆಗ್ರಹಿಸುತ್ತಿವೆ.
ಲಿಂಗಾಯತ ಸಮುದಾಯ ಒಳಪಂಗಡವಾದ ಪಂಚಮಸಾಲಿ ಸಮುದಾಯದವರು ತಮ್ಮನ್ನು ಪ್ರವರ್ಗ 2ಎಗೆ ಸೇರಿಸಬೇಕೆಂದು ದೊಡ್ಡ ಮಟ್ಟದ ಹೋರಾಟವನ್ನೇ ನಡೆಸಿದ್ದಾರೆ. ಪ್ರಸ್ತುತ ಈ ಬೇಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇರುವುದರಿಂದ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಅದೇ ರೀತಿ ಒಕ್ಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಹಲವು ಒಳಪಂಗಡಗಳನ್ನು ಕ್ರಮವಾಗಿ 3ಎ, 3ಬಿ ಮೀಸಲಾತಿಗೆ ಸೇರಿಸಲಾಗಿದೆ. ಆದರೆ ಇವುಗಳಿಗೆ ಕೇಂದ್ರ ಮಟ್ಟದಲ್ಲಿ ಮಾನ್ಯತೆ ಇಲ್ಲ. ಹಾಗಾಗಿ ಆ ಸಮುದಾಯದ ಹಲವು ಒಳಪಂಗಡಗಳು ತಮ್ಮನ್ನು ಪ್ರವರ್ಗ 1, 2ರಡಿ ತರಬೇಕೆಂದು ಆಗ್ರಹಿಸುತ್ತಿವೆ.
ಕೇಂದ್ರ ಸರ್ಕಾರ ಒಬಿಸಿ ಮಾನ್ಯತೆಗೆ ಸಮುದಾಯಗಳನ್ನು ಗುರುತಿಸುವ ಅಧಿಕಾರವನ್ನು ಕಾಯ್ದೆ ತಿದ್ದುಪಡಿ ಮೂಲಕ ರಾಜ್ಯಗಳಿಗೆ ನೀಡಿದ್ದೇ ಆದರೆ ಇಂತಹ ಅನೇಕ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಈ ಬೇಡಿಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ರಾಜ್ಯಕ್ಕೆ ಪ್ರಾಪ್ತವಾಗುತ್ತದೆ ಎನ್ನುತ್ತಾರೆ ತಜ್ಞರು.
ನಮ್ಮ ದೇಶದಲ್ಲಿ ಒಂದೊಂದು ರಾಜ್ಯದ ಜಾತಿ ಸಮೀಕರಣ ಒಂದೊಂದು ರೀತಿಯಿದೆ. ಒಂದು ರಾಜ್ಯದಲ್ಲಿರುವ ಎಷ್ಟೋ ಜಾತಿಗಳು ಮತ್ತೊಂದು ರಾಜ್ಯದಲ್ಲಿಲ್ಲ ಅಥವಾ ಅಲ್ಲಿ ಬೇರೆ ಹೆಸರಲ್ಲಿ ಗುರುತಿಸಿಕೊಂಡಿರುತ್ತವೆ. ಈ ಜಾತಿಗಳಲ್ಲೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟುವ್ಯತ್ಯಾಸಗಳಿರುತ್ತವೆ. ಹೀಗಾಗಿ ಆಯಾ ರಾಜ್ಯಗಳಲ್ಲಿನ ಸಮುದಾಯಗಳ ಅಧ್ಯಯನ ನಡೆಸಿ ಒಬಿಸಿ ಮಾನ್ಯತೆ ನೀಡುವ ಅಧಿಕಾರ ರಾಜ್ಯಗಳಿಗೇ ಇದ್ದರೆ ಬಹಳ ಒಳ್ಳೆಯದು. ರಾಜ್ಯದಲ್ಲಿ ಸುಮಾರು 1700 ಜಾತಿಗಳಿದ್ದು, ಸಾಕಷ್ಟುಸಮುದಾಯಗಳನ್ನು ಇನ್ನೂ ಗುರುತಿಸಲೂ ಆಗಿಲ್ಲ. ಅಂತಹ ಸಮುದಾಯಗಳನ್ನು ಗುರುತಿಸಲು ರಾಜ್ಯಗಳಿಗೆ ಒಬಿಸಿ ಮಾನ್ಯತೆ ಮಂಜೂರು ಅಧಿಕಾರ ನೀಡುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ.
- ಸಿ.ಎಸ್. ದ್ವಾರಕನಾಥ್, ಮಾಜಿ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ.
ರಾಜ್ಯಗಳಿಗೆ ಒಬಿಸಿ ಮಾನ್ಯತೆ ನೀಡುವ ಅಧಿಕಾರ ಸಿಕ್ಕರೆ ನಿಜವಾಗಿಯೂ ಹಿಂದುಳಿದಿರುವ ಸಮುದಾಯಗಳನ್ನು ಗುರುತಿಸಲು ಅನುಕೂಲವಾಗುತ್ತದೆ. ಸಾಕಷ್ಟುಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿದೂಗಿಸಲು ಸಹಕಾರಿಯಾಗಲಿದೆ. ಕರ್ನಾಟದಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಅಧ್ಯಯನ ನಡೆಸಿದರೆ ಸುಮಾರು 70ರಿಂದ 80ರಷ್ಟುಸಣ್ಣ ಪುಟ್ಟಹಿಂದುಳಿದ ಸಮುದಾಯಗಳಿಗೆ ಒಬಿಸಿ ಮಾನ್ಯತೆ ದೊರೆಯುವ ಸಾಧ್ಯತೆ ಇದೆ.
- ಪಿ.ಆರ್. ರಮೇಶ್, ಶಾಸಕರು, ಹಿಂದುಳಿದ ವರ್ಗಗಳ ಮುಖಂಡರು


Share this Story:

Follow Webdunia kannada

ಮುಂದಿನ ಸುದ್ದಿ

ಒಬಿಸಿ ಮಾನ್ಯತೆ ಅಧಿಕಾರ ಮತ್ತೆ ರಾಜ್ಯಗಳ ವ್ಯಾಪ್ತಿಗೆ!