ನವದೆಹಲಿ : ಒಮಿಕ್ರೋನ್ ರೂಪಾಂತರಿ ಕೊರೋನಾ ವೈರಸ್ನ ಗುಣಲಕ್ಷಣಗಳು, ಸೋಂಕಿನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿರುವ ಹೊತ್ತಿನಲ್ಲೇ, ಇದುವರೆಗೆ ಪತ್ತೆಯಾದ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್ಗೆ ನಂಟಿಲ್ಲ.
ಇದೊಂದು ಪ್ರತ್ಯೇಕ ಪ್ರಭೇದ. ಹೀಗಾಗಿ ಭಾರತದಲ್ಲೀಗ ಸಮಾನಾಂತರಾವಾಗಿ ಎರಡು ಕೋವಿಡ್ ಅಲೆ ಕಾಣಿಸಿಕೊಂಡಿದೆ ಎಂದು ಹಿರಿಯ ವೈದ್ಯರೊಬ್ಬರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಜಿ ಮುಖ್ಯಸ್ಥ, ಹಿರಿಯ ವೈರಾಣು ತಜ್ಞ ಡಾ. ಟಿ.ಜಾಕೋಬ್ ಜಾನ್ ಮಾತನಾಡಿ, ವುಹಾನ್ನಲ್ಲಿ ಮೊತ್ತ ಮೊದಲಿಗೆ ಸೋಂಕಿಗೆ ಕಾರಣವಾದ ವುಹಾನ್-ಡಿ614ಜಿ, ನಂತರ ಕಾಣಿಸಿಕೊಂಡ ಆಲ್ಪಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ, ಮು ಸೇರಿದಂತೆ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್ ಸಂಬಂಧ ಹೊಂದಿಲ್ಲ.
ಕೋವಿಡ್ ಸಾಂಕ್ರಾಮಿಕದ ಬೆಳವಣಿಗೆಯ ಹಾದಿಯಲ್ಲಿ ಕಂಡುಬಂದ ಯಾವುದೇ ವೈರಸ್ ಜೊತೆಗೆ ಇದು ನಂಟು ಹೊಂದಿಲ್ಲ. ಹೀಗಾಗಿ ನಾವೀಗ ಭಾರತದಲ್ಲಿ ಡೆಲ್ಟಾಮತ್ತು ಒಮಿಕ್ರೋನ್ ಎಂಬ ಎರಡು ಪ್ರತ್ಯೇಕ ಕೋವಿಡ್ ಅಲೆಯನ್ನು ಎದುರಿಸುತ್ತಿದ್ದೇವೆ ಎಂಬ ಚಿಂತನೆಯತ್ತ ಸಾಗಬೇಕಿದೆ ಎಂದು ಜಾನ್ ಹೇಳಿದ್ದಾರೆ.