ಕ್ವಿಟ್ ಇಂಡಿಯಾ ಚಳವಳಿ (1942): ಬ್ರಿಟಿಷ್ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ ಕಳುಹಿಸಿದ್ದ ಸ್ಟಾಫರ್ಡ್ ಕ್ರಿಪ್ಸ್ ಆಯೋಗವು 1942ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು.
ಈ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು, ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು, ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ ಸಲಹೆಗಳನ್ನು ನೀಡಿತು. ಈ ಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿತು. ʻಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ಬಿಟ್ಟು ತೊಲಗಿ ಎನ್ನುವುದು ಕ್ವಿಟ್ ಇಂಡಿಯಾ ಚಳವಳಿಯ ಆಶಯವಾಗಿತ್ತು.
ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮುದಿನಿ ನದಿಯ ದಂಡೆಯ ಮೇಲಿರುವ ಒಂದು ಚಿಕ್ಕ ಗ್ರಾಮ. ಈ ಗ್ರಾಮವು ಭಾರತದಲ್ಲೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊದಲ ಗ್ರಾಮವಾಯಿತು. ಈ ಗ್ರಾಮದ ಜನರು ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು. ಚಲೇಜಾವ್ ಚಳವಳಿಯಿಂದ ಪ್ರಭಾವಿತರಾದ ಈ ಗ್ರಾಮದ ಯುವಕರೆಲ್ಲರೂ ಗಾಂಧೀ ಟೋಪಿ ಧರಿಸಿ ರಾಷ್ಟ್ರಧ್ವಜ ಹಿಡಿದು ಸಭೆಗಳನ್ನ ನಡೆಸುತ್ತಿದ್ದರು.
1942ರ ಸೆಪ್ಟೆಂಬರ್ 25ರಂದು ಈ ಗ್ರಾಮದ ಜನರು ತಮ್ಮ ಗ್ರಾಮವು ಸ್ವತಂತ್ರವೆಂದು ಘೋಷಿಸಿ ವೀರಭದ್ರನ ದೇವಾಲಯದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಪಟೇಲ ಮತ್ತು ಶಾನುಭೋಗರ ದಫ್ತರುಗಳನ್ನು ಕಿತ್ತುಕೊಂಡು ಸುಟ್ಟು ಹಾಕಿದರು. ಈ ಘಟನೆ ಘಟಿಸಿದ 3 ದಿನಗಳ ತರುವಾಯ ಒಬ್ಬ ಅಮಲ್ದಾರ್ ಮತ್ತು ಒಬ್ಬ ಪೊಲೀಸ್ ಅಧಿಕಾರಿಗಳು ಪೊಲೀಸರೊಂದಿಗೆ ಬಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿ 3 ಜನ ಗ್ರಾಮಸ್ಥರನ್ನು ಕೊಂದು ಹಾಕಿದರು.
ಈ ಘಟನೆಯಿಂದ ಕ್ರೋಧಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದಂಗೆಯೆದ್ದರು. ಈ ಗಲಭೆಯಲ್ಲಿ ಪೊಲೀಸ್ ಅಧಿಕಾರಿಗಳೂ ಮರಣ ಹೊಂದಿದರು. ಈ ಸುದ್ದಿ ತಿಳಿದ ತಕ್ಷಣ ಸರ್ಕಾರವು ಈಸೂರು ಗ್ರಾಮಕ್ಕೆ ಸೈನ್ಯ ಮತ್ತು ಪೊಲೀಸ್ ಪಡೆಯನ್ನ ಕಳಿಸಿತು. ಈ ಸೈನ್ಯವು ಮುಗ್ಧ ಜನರ ಮೇಲೆ ಚಿತ್ರಹಿಂಸೆಯನ್ನು ಕೈಗೊಂಡಿತು. ಗುಂಡು ಹಾರಿಸಿ 41 ಜನರನ್ನು ಬಂಧಿಸಿತು. ದಂಗೆಗೆ ಕಾರಣರಾದವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿತು.
1943ರ ಜನವರಿ 9 ರಂದು ಅಂದು ರಾಜ್ಯವಾಗಿದ್ದ ಮೈಸೂರು ಉಚ್ಛ ನ್ಯಾಯಾಲಯದ ತೀರ್ಪಿನ ಪ್ರಕಾರ ಗುರಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯನಾರಾಯಣಾಚಾರ್ಯ ಮತ್ತು ಶಂಕರಪ್ಪ ಎಂಬ 5 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಸಿದ್ಧಮ್ಮ, ಹಾಲಮ್ಮ ಮತ್ತು ಪಾರ್ವತಮ್ಮ ಎಂಬ ಐದು ಜನರಿಗೆ ಜೀವಾವಧಿ ಗಡಿಪಾರು ಶಿಕ್ಷೆ ನೀಡಿತು. 1946ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತವು ಸ್ಮರಣೀಯವಾದುದಾಗಿದೆ.