ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಹಲವಾರು ರಾಜ್ಯಗಳು ಹೊಸ ರೂಪಾಂತರ ಸೋಂಕು ಹರಡಬಾರದು ಎನ್ನುವ ದೃಷ್ಠಿಯಿಂದ ನಿರ್ಬಂಧಗಳನ್ನು ಘೋಷಿಸಿದ್ದು,
ಕ್ರಿಸ್ಮಸ್ ಮತ್ತು ಹೊಸ ವರ್ಷದ ಪಾರ್ಟಿಗಳ ಮೇಲೆ ನಿರ್ಬಂಧ ಹೇರಿದೆ. ಭಾರತದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 358 ಹೊಸ ರೂಪಾಂತರದ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣ ದೃಢಪಟ್ಟಿದೆ.
ಒಬ್ಬರ ಮೂಲಕ ಮತ್ತೊಬ್ಬರಿಗೆ ಓಮೈಕ್ರಾನ್ ವೇಗವಾಗಿ ಹರಡುತ್ತಿದ್ದು, ಮತ್ತು ರೂಪಾಂತರದ ದ್ವಿಗುಣ ದರವು 1.5 ದಿನಗಳು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶುಕ್ರವಾರ ಎಚ್ಚರಿಸಿದ್ದರಿಂದ ರಾಜ್ಯಗಳು ನಿರ್ಬಂಧ ಹೇರಿವೆ. ಯಾವ್ಯವ ರಾಜ್ಯಗಳು ನಿರ್ಬಂಧ ವಿಧಿಸಿದೆ ಎಂಬುದು ಇಲ್ಲಿದೆ.
ದೆಹಲಿ
ರಾಷ್ಟ್ರ ರಾಜಧಾನಿಯಲ್ಲಿನ ಎಲ್ಲಾ ವಯಸ್ಕರಿಗೆ ಕನಿಷ್ಠ ಮೊದಲ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದು, ದೆಹಲಿಯು ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗೆ ಸಂಬಂಧಿಸಿದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪಾರ್ಟಿಗಳನ್ನು ನಿಷೇಧಿಸಲಾಗಿದೆ.
ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಮ್ಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವಂತೆ ಡಿಡಿಎಂಎ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಮಹಾರಾಷ್ಟ್ರ
ಅತಿ ಹೆಚ್ಚು ಓಮೈಕ್ರಾನ್ ಪ್ರಕರಣಗಳಿರುವ ಮತ್ತೊಂದು ರಾಜ್ಯ ಮಹಾರಾಷ್ಟ್ರ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ಘೋಷಿಸಿದೆ. ರಾತ್ರಿ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 5 ಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರುವುದನ್ನ ನಿಷೇಧಿಸಿದೆ.
ರಾಜ್ಯ ಸರ್ಕಾರವು ರಾಜ್ಯದಲ್ಲಿ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧಗಳನ್ನು ಘೋಷಣೆ ಮಾಡಿದೆ. ಈ ಮೊದಲು, ಸರ್ಕಾರ ಡಿಸೆಂಬರ್ 31 ರ ಮಧ್ಯರಾತ್ರಿಯವರೆಗೆ ಮುಂಬೈನಲ್ಲಿ ಸೆಕ್ಷನ್ 144 ಅನ್ನು ವಿಧಿಸಿತ್ತು. ಮಹಾನಗರದಲ್ಲಿನ ಬೀಚ್ಗಳು ಅಥವಾ ಪ್ರವಾಸಿ ಹಾಟ್ಸ್ಪಾಟ್ಗಳಲ್ಲಿ ಯಾವುದೇ ಪಾರ್ಟಿಗಳು ಸಹ ನಡೆಯುವಂತಿಲ್ಲ ಎಂದು ಆದೇಶಿಸಿದೆ.
ಮಧ್ಯಪ್ರದೇಶ
ಮಧ್ಯಪ್ರದೇಶ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ ಮತ್ತು ಜನರು ಕೊರೊನಾ ಪ್ರೋಟೋಕಾಲ್ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಆದೇಶ ನೀಡಿದೆ.ಇನ್ನು ಗುರುವಾರ ರಾತ್ರಿಯಿಂದಲೇ ಕರ್ಫ್ಯೂ ಜಾರಿಗೆ ಬಂದಿದ್ದು, ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ.
ಗುಜರಾತ್
ಅಹಮದಾಬಾದ್, ವಡೋದರಾ, ಸೂರತ್, ರಾಜ್ಕೋಟ್, ಭಾವನಗರ, ಜಾಮ್ನಗರ, ಗಾಂಧಿನಗರ ಮತ್ತು ಜುನಾಗಢ್ನಲ್ಲಿ ಡಿಸೆಂಬರ್ 25 ರಿಂದ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಸ್ತರಿಸುವುದಾಗಿ ಗುಜರಾತ್ ಸರ್ಕಾರ ಶುಕ್ರವಾರ ಘೋಷಿಸಿದೆ. ಮೊದಲು ರಾತ್ರಿ ಕರ್ಫ್ಯೂ 1 ರಿಂದ 5 ರವರೆಗೆ ವಿಧಿಸಲಾಗಿತ್ತು.
ಹರಿಯಾಣ
ಹರಿಯಾಣದಲ್ಲಿ ಜನವರಿ 1, 2022 ರಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದ್ದು, 200 ಕ್ಕಿಂತ ಹೆಚ್ಚು ಜನರು ಯಾವುದೇ ಸಭೆ ಸಮಾರಂಭ ಅಥವಾ ಪಾರ್ಟಿಗಳಲ್ಲಿ ಸೇರುವಂತಿಲ್ಲ ಎಂದು ಆದೇಶ ನೀಡಿದೆ. ಜನವರಿ 1, 2022 ರಿಂದ ಹರಿಯಾಣದ ಮಾಲ್ಗಳು, ಸಿನಿಮಾ ಹಾಲ್ಗಳು ಮತ್ತು ರೆಸ್ಟೋರೆಂಟ್ಗಳಂತಹ ಜನನಿಬಿಡ ಸ್ಥಳಗಳ ಒಳಗೆ 2 ಡೋಸ್ ಲಸಿಕೆ ಹಾಕಿಸಿಕೊಳ್ಳದ ಜನರಿಗೆ ಅವಕಾಶ ನೀಡಬಾರದು ಎಂದು ಹರಿಯಾಣ ಸರ್ಕಾರ ಈ ಹಿಂದೆ ಘೋಷಿಸಿದೆ.
ಕರ್ನಾಟಕ
ಕರ್ನಾಟಕ ಸರ್ಕಾರ ಕೂಡ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿದೆ. ಆದರೆ, ಚರ್ಚ್ಗಳಲ್ಲಿ ಕ್ರಿಸ್ಮಸ್ ಆಚರಣೆಗಳು ಮತ್ತು ಪ್ರಾರ್ಥನಾ ಸಭೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಈ ಬಾರಿ ವಿಧಿಸಿಲ್ಲ. ಹೆಚ್ಚಿನ ಎಚ್ಚರಿಕೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮತ್ತು ಸೋಂಕು ಹರಡುವುದನ್ನ ತಡೆಯುವ ಸಲುವಾಗಿ ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದು, ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಹೆಚ್ಚು ಶ್ರಮವಹಿಸುತ್ತಿದ್ದಾರೆ.
ಉತ್ತರ ಪ್ರದೇಶ
ಹಲವಾರು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 25 ರಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.
ರಾತ್ರಿ ಕರ್ಫ್ಯೂ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ವಿಧಿಸಲಾಗಿದ್ದು, ಮದುವೆಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು 200ಕ್ಕೆ ಮಿತಿಗೊಳಿಸುವಂತೆ ಸಿಎಂ ಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.