Select Your Language

Notifications

webdunia
webdunia
webdunia
webdunia

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ನೇಮಕ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ನೇಮಕ
ಬೆಂಗಳೂರು , ಮಂಗಳವಾರ, 27 ಜುಲೈ 2021 (20:07 IST)
ಬೆಂಗಳೂರು: ಬಿ ಎಸ್ ಯಡಿಯೂರಪ್ಪ ಅವರ ರಾಜೀನಾಮೆಯ ನಂತರ ತೆರವಾದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿದೆ.

ಈ ಮೂಲಕ ಯಡಿಯೂರಪ್ಪ ಅವರ ಪಾಳಯದ ನಾಯಕನನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಿ, ಬಿಎಸ್ವೈ ಅವರಿಗೂ ಬೇಸರವಾಗದಂತೆ ಹೈಕಮಾಂಡ್ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದರ್ಥದಲ್ಲಿ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಬಿಎಸ್ವೈ ಆಪ್ತ ಬಣ ಬಿಜೆಪಿ ಅವನತಿಗೆ ಕಾರಣವಾಗಬಹುದು ಎನ್ನಲಾಗಿತ್ತು.

ಜತೆಗೆ ಪಂಚಮಸಾಲಿ ಲಿಂಗಾಯತ ಸಮುದಾಯದ ಅಘೋಷಿತ ನಾಯಕ ಯಡಿಯೂರಪ್ಪ ಅವರನ್ನು ಇಳಿ ವಯಸ್ಸಿನಲ್ಲಿ ಬಿಜೆಪಿ ಹೈಕಮಾಂಡ್ ಒತ್ತಾಯ ಪೂರ್ವಕವಾಗಿ, ಬೇಸರ ತರಿಸಿ ಕೆಳಗಿಳಿಸಿದೆ ಎಂಬ ಆರೋಪ ಎಲ್ಲರಿಂದಲೂ ಕೇಳಿ ಬಂದಿತ್ತು. ಸಮುದಾಯದ ಹಲವು ಸ್ವಾಮೀಜಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲದೇ ಬಿಜೆಪಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಇದೆಲ್ಲವನ್ನೂ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಂಡಿದೆ ಎಂಬುದು ಇದೀಗ ಸ್ಪಷ್ಟವಾಗಿದೆ.

ಒಂದೆಡೆ ಬಿಎಸ್ ಯಡಿಯೂರಪ್ಪ ಮತ್ತು ಅವರ ಪರ ಬಣಕ್ಕೆ ಬೇಸರವಾಗದಂತೆ ನೋಡಿಕೊಂಡು, ಇನ್ನೊಂದೆಡೆ 78 ವರ್ಷ ದಾಟಿರುವ ಯಡಿಯೂರಪ್ಪ ಅವರಿಗೆ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ಉತ್ತರಾಧಿಕಾರಿಯಾಗಿಯೂ ಬೊಮ್ಮಾಯಿ ಅವರನ್ನು ಬಿಜೆಪಿ ಬಿಂಬಿಸಿದೆ.

ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ನಾಳೆ ಮಧ್ಯಾಹ್ನ 1.20ಕ್ಕೆ ಬಸವರಾಜ್ ಬೊಮ್ಮಾಯಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ?