ಬೆಂಗಳೂರು: ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷವಾದ ಮೇಲಂತೂ ಚೀನಾ ಮೂಲದ ಟಿಕ್ ಟಾಕ್ ಬ್ಯಾನ್ ಮಾಡಬೇಕೆಂದು ಆಗ್ರಹ ಜೋರಾಗಿದೆ. ಈ ನಡುವೆ ಕನ್ನಡ ಕಿರುತೆರೆ ನಟಿ ಪ್ರಿಯಾ ಜೆ ಆಚಾರ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಟಿಕ್ ಟಾಕ್ ವಿಡಿಯೋ ಪ್ರಕಟಿಸಿದ್ದಕ್ಕೆ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಬಂದಿದೆ.
ಗಟ್ಟಿಮೇಳ ಧಾರವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ನಟಿ ಪ್ರಿಯಾ ಫಾದರ್ಸ್ ಡೇ ನಿಮಿತ್ತ ತಮ್ಮ ತಂದೆಗೆ ಶುಭಾಷಯ ಕೋರಲು ಹಳೆಯ ಟಿಕ್ ಟಾಕ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದರು.
ಇದನ್ನು ನೋಡುತ್ತಿದ್ದಂತೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಈ ನಟಿಯನ್ನು ಬ್ಯಾನ್ ಮಾಡಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದರು. ಮತ್ತೆ ಕೆಲವರು ಸ್ವಲ್ಪವಾದರೂ ಭಾರತೀಯ ಸೇನೆ ಮೇಲೆ ಗೌರವವಿರಲಿ. ನಿಮಗೆ ಟಿಕ್ ಟಾಕ್ ವಿಡಿಯೋ ಬಿಟ್ಟು ಬೇರೇನೂ ಸಿಗಲಿಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಚಾರ ವಿವಾದವಾಗುತ್ತಿದ್ದಂತೇ ಎಚ್ಚೆತ್ತುಕೊಂಡ ನಟಿ ತಕ್ಷಣವೇ ಸ್ಪಷ್ಟನೆ ಕೊಟ್ಟಿದ್ದು, ಇದು ಹಳೇ ವಿಡಿಯೋ. ನಿಮ್ಮ ಕಾಮೆಂಟ್ ಗಳನ್ನು ನಾನು ಗೌರವಿಸುವೆ. ಆದರೆ ಈಗ ನನ್ನ ಫೋನ್ ನಲ್ಲಿ ಟಿಕ್ ಟಾಕ್ ಆಪ್ ಡಿಲೀಟ್ ಮಾಡಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ಒಬ್ಬ ಭಾರತೀಯಳಾಗಿ ಭಾರತೀಯ ಸೇನೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಪ್ರಿಯಾ ಸ್ಪಷ್ಟನೆ ಕೊಡಬೇಕಾಗಿ ಬಂದಿದೆ.