Publish Date: Mon, 08 Jun 2020 (09:13 IST)
Updated Date: Mon, 08 Jun 2020 (09:15 IST)
ಬೆಂಗಳೂರು: ಕನ್ನಡ ಕಿರುತೆರೆಯನ್ನು ಲಾಕ್ ಡೌನ್ ಬಳಿಕ ಡಬ್ಬಿಂಗ್ ಧಾರವಾಹಿಗಳು ಆಕ್ರಮಿಸಿಕೊಳ್ಳುತ್ತಿವೆ. ಇದರ ಪರಿಣಾಮ ಟಿಆರ್ ಪಿ ಇಲ್ಲದ ಕನ್ನಡ ಧಾರವಾಹಿಗಳು ಒಂದೊಂದಾಗಿ ಪ್ರಸಾರ ನಿಲ್ಲಿಸುತ್ತಿವೆ.
ಅದರಲ್ಲೂ ಸುವರ್ಣ ವಾಹಿನಿಯಂತೂ ತನ್ನ ಬಹುತೇಕ ಧಾರವಾಹಿಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿ ಡಬ್ಬಿಂಗ್ ಧಾರವಾಹಿಗಳಿಗೆ ಅನುವು ಮಾಡಿಕೊಟ್ಟಿದೆ. ಇದರ ವಿರುದ್ಧ ಈಗ ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ, ಕೀರುತಿಗೊಬ್ಬ ಧಾರವಾಹಿಯ ನಾಯಕ ತೇಜಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾನೆಲ್ ವಿರುದ್ಧ ಬಹಿರಂಗ ಕಿಡಿ ಕಾರಿರುವ ತೇಜಸ್ ನಮಗೆ ಇದರ ಬಗ್ಗೆ ಮಾಹಿತಿಯೂ ಇರಲಿಲ್ಲ. ಡಬ್ಬಿಂಗ್ ಧಾರವಾಹಿಗಳಿಗೆ ಅನುವು ಮಾಡಿಕೊಡಲು ಕನ್ನಡದ ಧಾರವಾಹಿಗಳನ್ನು ನಿಲ್ಲಿಸಲಾಗುತ್ತಿದೆ. ನಾವು ಲಾಕ್ ಡೌನ್ ಬಳಿಕ ಶೂಟಿಂಗ್ ಗೆ ಸಿದ್ಧರಾಗಿದ್ದೆವು. ಆದರೆ ಈಗ ಚಾನೆಲ್ ಏಕಾಏಕಿ ಧಾರವಾಹಿ ನಿಲ್ಲಿಸಲು ಸೂಚಿಸಿದೆ. ಡಬ್ಬಿಂಗ್ ಧಾರವಾಹಿ ವೀಕ್ಷಿಸುವ ಪ್ರೇಕ್ಷಕರು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಕನ್ನಡ ಧಾರವಾಹಿಗಳನ್ನು ನಿರ್ಲಕ್ಷಿಸಿ ಬೇರೆ ಧಾರವಾಹಿಯನ್ನು ನೋಡುವುದರಿಂದ ಕನ್ನಡದ ಎಷ್ಟೋ ಕಲಾವಿದರು, ತಾಂತ್ರಿಕ ಕೆಲಸಗಾರರಿಗೆ ಕೆಲಸವಿಲ್ಲದೇ ಆಗುತ್ತದೆ. ಕನ್ನಡ ಕಿರುತೆರೆಯಲ್ಲಿ ಒಗ್ಗಟ್ಟೇ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.