Publish Date: Mon, 08 Jun 2020 (08:47 IST)
Updated Date: Mon, 08 Jun 2020 (08:50 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ಲವ್ ಮ್ಯಾರೇಜ್ ಆಗಿರುವ ವಿಚಾರ ಎಲ್ಲರಿಗೂ ಗೊತ್ತು. ಇವರಿಬ್ಬರ ಮದುವೆಗೂ ಮನೆಯಲ್ಲಿ ಆರಂಭದಲ್ಲಿ ಮೇಘನಾ ಮನೆಯಲ್ಲಿ ಸಣ್ಣ ಮಟ್ಟಿನ ವಿರೋಧವಿತ್ತಂತೆ. ಈ ಬಗ್ಗೆ ನವರಸನಾಯಕ ಜಗ್ಗೇಶ್ ಹೇಳಿಕೊಂಡಿದ್ದಾರೆ.
ಒಂದು ದಿನ ಮಧ್ಯರಾತ್ರಿ 11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ಮಾಮ ನಾನು ಚಿರು ಅಂದ. ವಿಷಯ ನಾನು ಮೇಘನ ಮದುವೆ ಆಗಬೇಕು. ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ-ಅಮ್ಮನ ಜತೆ ಮಾತನಾಡಬೇಕು ಅಂದ. ನಾನು ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತನಾಡಿ ನನ್ನ ಸ್ನೇಹಿತ ಜ್ಯೋತಿಷಿಗಳ ಬಳಿ ಇಬ್ಬರ ಜಾತಕ ನೋಡಿಸಿದೆ. ಅಷ್ಟಮದಲ್ಲಿ ಕುಜದೋಷವಿದೆ. ಪೂಜೆ ಮಾಡಿದರೆ ಸರಿ ಹೋಗುತ್ತದೆ ಎಂದರು. ಆ ಪೂಜೆ ಮಾಡಿಸಿದರೋ ಇಲ್ಲವೋ ಗೊತ್ತಿಲ್ಲ.
ಅವರ ಮನೆಯ ಎದುರೇ ನನಗೆ ಶೂಟಿಂಗ್ ಇತ್ತು. ಶೂಟಿಂಗ್ ಮುಗಿಸಿ ಮೇಘನಾ ಮನೆಗೆ ಹೋಗಿ ಕಾಫಿ ಕುಡಿದು ಸುಂದರ್ ಜತೆ ಮಾತನಾಡಿ ಮದುವೆ ಫಿಕ್ಸ್ ಮಾಡಿಸಿ ಬಂದೆವು. ದೇವರ ದಯೆಯಿಂದ ಮದುವೆ ಮುಗಿಯಿತು. ಆ ಬಳಿಕವೂ ಅನೇಕ ಬಾರಿ ಕರೆ ಮಾಡಿ ಮಾಮ ಮನೆಗೆ ಬಂದು ಅಜ್ಜಿಯ ಕೈ ರುಚಿ ಊಟ ಮಾಡಿ ಎನ್ನುತ್ತಿದ್ದ. ಆದರೆ ನಾನು ಹೂಂ ಅಂತಿದ್ದೆನೇ ಹೊರತು ಹೋಗಿರಲಿಲ್ಲ. ಮಧ್ಯಾಹ್ನ ಊಟ ಮಾಡಿ ಮಲಗಿ ಎದ್ದು ನೋಡಿದರೆ ಇಂತಹಾ ಸುದ್ದಿ. ಹೇಗೆ ಅರಗಿಸಿಕೊಳ್ಳಲಿ ಎಂದು ಜಗ್ಗೇಶ್ ಬೇಸರದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.