ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಕೊನೆಯ ಹಂತಕ್ಕೆ ತಲುಪಿದ್ದು, ಈ ವಾರ ಮನೆಗೆ ಸ್ಪರ್ಧಿಗಳಿಗೆ ಹಿತವಚನ ನೀಡಲು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದಾರೆ.
ಮನೆಗೆ ಬಂದ ಅವರನ್ನು ಸ್ಪರ್ಧಿಗಳು ಕಾಲಿಗೆ ನಮಸ್ಕರಿಸುವ ಮೂಲಕ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಮನೆಯಲ್ಲಿ ದೇವರ ಪೂಜೆ ಸಲ್ಲಿಸಿದ ಸ್ವಾಮೀಜಿಗಳು ಸ್ಪರ್ಧಿಗಳ ಭವಿಷ್ಯ ನುಡಿದಿದ್ದಾರೆ.
ವಿಶೇಷವಾಗಿ ಡ್ರೋಣ್ ಪ್ರತಾಪ್ ಅವರ ಭವಿಷ್ಯ ನುಡಿದಿರುವ ಸ್ವಾಮೀಜಿ ನಿನಗೆ ಕುಟುಂಬ ಜೀವನ ಆಗಿಬರಲ್ಲ ಎಂದು ಹೇಳಿ ಶಾಕ್ ನೀಡಿದ್ದಾರೆ. ಹೀಗೆ ಹೇಳುವುದು ಕಠಿಣ ಎನಿಸಬಹುದು. ಆದರೆ ನೀನು ಕುಟುಂಬದಿಂದ ದೂರವಿರಬೇಕು. ಕುಟುಂಬ ಜೀವನ ಸರಿಬರಲ್ಲ. ದೂರ ಇದ್ದು ಧೂಪ ಆಗ್ತೀಯೋ ಹತ್ತಿರ ಇದ್ದು ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಅವರ ಮಾತು ಕೇಳಿ ಪ್ರತಾಪ್ ಗೂ ಶಾಕ್ ಆಗಿದೆ. ಇಷ್ಟು ದಿನ ಹೆತ್ತವರಿಂದ ದೂರವಿದ್ದ ಪ್ರತಾಪ್ ಈಗ ಕುಟುಂಬದೊಂದಿಗೆ ಒಂದಾಗುವ ಮನಸ್ಸು ಮಾಡಿದ್ದಾರೆ. ಅವರ ತಂದೆ-ತಾಯಿ ಕೂಡಾ ಇತ್ತೀಚೆಗೆ ಬಿಗ್ ಬಾಸ್ ಗೆ ಭೇಟಿ ನೀಡಿದ್ದರು. ಆದರೆ ಈ ಹೊತ್ತಿನಲ್ಲೇ ಸ್ವಾಮೀಜಿ ಭವಿಷ್ಯ ಶಾಕ್ ನೀಡಿದೆ.
ಇನ್ನು, ವರ್ತೂರು ಸಂತೋಷ್ ಗೆ ತೊಡೆಯಲ್ಲಿರುವ ಟ್ಯಾಟೂನಿಂದಲೇ ನಿನಗೆ ಜೀವನದಲ್ಲಿ ಕೆಟ್ಟದ್ದಾಗುತ್ತಿದೆ ಎಂದಿದ್ದಾರೆ. ಈ ಟ್ಯಾಟೂ ಹಾಕಿಸಿಕೊಂಡ ಮೇಲೆ ನಿನಗೆ ಕಷ್ಟ-ನಷ್ಟಗಳು ಶುರುವಾಗಿದ್ದು ಹೌದಲ್ವೇ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಸಂತೋಷ್ ಕೂಡಾ ಹೌದು ಎಂದಿದ್ದಾರೆ.
ಯಾವ್ಯಾವ ಸ್ಪರ್ಧಿ ಬಗ್ಗೆ ಸ್ವಾಮೀಜಿಗಳು ಯಾವ ರೀತಿಯ ಭವಿಷ್ಯ ನುಡಿದಿದ್ದಾರೆ ಎಂಬುದನ್ನು ತಿಳಿಯಲು ಇಂದಿನ ಬಿಗ್ ಬಾಸ್ ಎಪಿಸೋಡ್ ನೋಡಬೇಕಾಗುತ್ತದೆ.