ಬಾಕಾ: ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವಕಪ್ ಚೆಸ್ ಕೂಟದ ಫೈನಲ್ ಪಂದ್ಯದಲ್ಲಿ ಇಂದು ಟೈಬ್ರೇಕರ್ ನಲ್ಲಿ ಭಾರತದ ಆರ್. ಪ್ರಜ್ಞಾನಂದ ಸೋಲು ಅನುಭವಿಸಿದ್ದು, ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ ವಿಜಯಿಯಾಗಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಫೈನಲ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಪ್ರಜ್ಞಾನಂದ ಇಂದು ಮೊದಲ ಸುತ್ತಿನಲ್ಲೇ ಹಿನ್ನಡೆ ಅನುಭವಿಸಿದರು.
ಇದರೊಂದಿಗೆ ಪ್ರಜ್ಞಾನಂದ ವಿಶ್ವಕಪ್ ಗೆಲ್ಲುವ ಕಿರಿಯ ಆಟಗಾರ ಎಂಬ ಖ್ಯಾತಿಗೊಳಗಾಗುವ ಅವಕಾಶವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡರು. ಆದರೆ ಫೈನಲ್ ತಲುಪಿದ ಕಿರಿಯ ಆಟಗಾರ ಎಂಬ ಖ್ಯಾತಿ ಅವರದ್ದಾಗಿದೆ. ಫೈನಲ್ ಪಂದ್ಯವನ್ನು ಅದೂ ವಿಶ್ವ ನಂ.1 ಶ್ರೇಯಾಂಕಿತ ಆಟಗಾರನ ವಿರುದ್ಧ ಮೂರು ದಿನಗಳವರೆಗೆ ತಂದು ನಿಲ್ಲಿಸಿದ ಪ್ರಜ್ಞಾನಂದನ ಹೋರಾಟಕ್ಕೆ ಮೆಚ್ಚುಗೆ ಹೇಳಲೇಬೇಕು.