ಬರ್ಮಿಂಗ್ ಹ್ಯಾಮ್: ಕೋಟ್ಯಾಂತರ ಭಾರತೀಯರು ತನ್ನ ಮೇಲಿಟ್ಟಿರುವ ಪದಕದ ನಿರೀಕ್ಷೆಯ ಭಾರ ಪಿ.ವಿ. ಸಿಂಧು ಮೇಲಿತ್ತು. ಆದರೆ ಕ್ವಾರ್ಟರ್ ಫೈನಲ್ ನ ಮೊದಲ ಸುತ್ತಿನಲ್ಲಿ ಸೋತಾಗ ಅಭಿಮಾನಿಗಳಿಗೆ ನಿಜಕ್ಕೂ ಹೃದಯವೇ ಬಾಯಿಗೆ ಬಂದಂತಾಗಿತ್ತು.
ಆದರೆ ಕೊನೆಗೂ ತಮ್ಮ ಅನುಭವ, ದೇಹ ಕ್ಷಮತೆಗೆ ತಕ್ಕ ಬೆಲೆ ಪಡೆದ ಪಿ.ವಿ. ಸಿಂಧು ಕಾಮನ್ ವೆಲ್ತ್ ಗೇಮ್ಸ್ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಮಲೇಷ್ಯಾದ ಜಿನ್ ವೂಯಿಸ್ ವಿರುದ್ಧ ಮೂರನೇ ಸೆಟ್ ನಲ್ಲಿ ರೋಚಕ ಗೆಲುವು ಕಂಡು 2-1 ಅಂತರದ ಗೆಲುವಿನೊಂದಿಗೆ ಸೆಮಿಫೈನಲ್ ಗೆ ಲಗ್ಗೆಯಿಟ್ಟರು.
ಮೊದಲ ಸೆಟ್ ನ್ನು ಆಘಾತಕಾರಿಯಾಗಿ ಸೋತ ಸಿಂಧು ಎರಡನೇ ಸೆಟ್ ನಲ್ಲಿ ತಮ್ಮ ಆಕ್ರಮಣಕಾರೀ ಆಟದಿಂದ ಕಮ್ ಬ್ಯಾಕ್ ಮಾಡಿದರು. ಮೂರನೇ ಸೆಟ್ ನಲ್ಲಿ ವಿಜಯಲಕ್ಷ್ಮಿ ಅತ್ತಿತ್ತ ಓಲಾಡುತ್ತಲೇ ಇದ್ದಳು. ಅತ್ತ ವೂಯಿಸ್ ಕೊಂಚ ಬಳಲಿದಂತೆ ಕಂಡರೆ ಸಿಂಧು ಅದನ್ನೇ ಲಾಭ ಮಾಡಿಕೊಂಡರು. ಮೂರನೇ ಸೆಟ್ ನಲ್ಲಿ ಕೊನೆಗೂ ಸಿಂಧು 21-18 ಅಂತರದಲ್ಲಿ ಗೆದ್ದಾಗ ನೆರೆದಿದ್ದ ಪ್ರೇಕ್ಷಕರು ನಿಟ್ಟುಸಿರಿಟ್ಟರು. ಇದೀಗ ಸಿಂಧು ಸೆಮಿಫೈನಲ್ ಗೆ ತಲುಪಿದ್ದಾರೆ. ಆದರೆ ಈ ಪಂದ್ಯ ಕೊನೆಯವರೆಗೂ ನೀಡಿದ ಟೆನ್ ಷನ್, ಒತ್ತಡ ನಿಜಕ್ಕೂ ಬ್ಯಾಡ್ಮಿಂಟನ್ ನ ರೋಚಕತೆಗೆ ಸಾಕ್ಷಿಯಾಯಿತು.