ಟೋಕಿಯೋ: ತೀವ್ರ ಕುತೂಹಲ ಕೆರಳಿಸಿದ್ದ ಪುರುಷರ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಎಲ್ಲರ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿ ಫೈನಲ್ ರೌಂಡ್ ಗೆದ್ದು ಚಿನ್ನದ ಪದಕ ಕೊರಳಿಗೆ ಹಾಕಿಕೊಂಡಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಮೊದಲನೆಯವರಾಗಿ ಫೈನಲ್ ಸುತ್ತು ಪ್ರವೇಶಿಸಿದ್ದ ನೀರಜ್ ಫೈನಲ್ ಸುತ್ತಿನ ಪಂದ್ಯದಲ್ಲಿ ಇಂದೂ ಅದೇ ರೀತಿಯ ಅದ್ಭುತ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ 87.58 ದೂರ ಎಸೆದು ಮೊದಲನೆಯವರಾಗಿ ಚಿನ್ನ ಗೆದ್ದರು.
ಇದರೊಂದಿಗೆ ಅಥ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೆ ಒಲಿಂಪಿಕ್ ಕೂಟದಲ್ಲೇ ಮೊದಲ ಚಿನ್ನದ ಪದಕ ಒಲಿದು ಬಂದಿತು. ಯಾರೂ ನಿರೀಕ್ಷಿಸದ ರೀತಿಯಲ್ಲಿ ನೀರಜ್ ದಾಖಲೆ ಮಾಡಿದರು. ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆಯನ್ನು ನೀರಜ್ ಮಾಡಿದರು.