ಬ್ರಸೆಲ್ಸ್: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಶನಿವಾರ ತಡರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನವನ್ನು ಕಳೆದುಕೊಂಡರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ 26 ವರ್ಷದ ನೀರಜ್ ಚೋಪ್ರಾ ಅವರು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದರು. ಗ್ರೆನೆಡಾದ ಪೀಟರ್ಸ್ ಆ್ಯಂಡರ್ಸನ್ ಅವರಿಗೆ ನಿಕಟ ಪೈಪೋಟಿಯೊಡ್ಡಿದ ನೀರಜ್ ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ಡೈಮಂಡ್ ಟ್ರೋಫಿ ಕಿರೀಟವನ್ನು ತಪ್ಪಿಸಿಕೊಂಡರು.
ಆ್ಯಂಡರ್ಸನ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ 87.87 ಮೀಟರ್ಸ್ ದೂರದ ಸಾಧನೆ ಮಾಡಿ ಚಿನ್ನವನ್ನು ಖಚಿತಪಡಿಸಿಕೊಂಡರು. ನೀರಜ್ ತಮ್ಮ ಮೂರನೇ ಥ್ರೋನಲ್ಲಿ 87.86 ಮೀ ಸಾಧನೆ ಮಾಡಿದರು. ಜರ್ಮನಿಯ ಜೂಲಿಯನ್ ವೇಬರ್ ಅವರು 85.87 ಮೀ ದೂರ ಥ್ರೋ ಮಾಡಿ ಮೂರನೇ ಸ್ಥಾನ ಪಡೆದರು.
ನೀರಜ್ 2022ರರ ಡೈಮಂಡ್ ಲೀಗ್ ಕೂಟದಲ್ಲಿ ಚಿನ್ನ ಮತ್ತು 2023ರಲ್ಲಿ ಬೆಳ್ಳಿ ಗೆದ್ದಿದ್ದ ನೀರಜ್ ಹ್ಯಾಟ್ರಿಕ್ ಪದಕದ ಸಾಧನೆ ಮೆರೆದರು.