Publish Date: Sun, 25 Sep 2022 (21:07 IST)
Updated Date: Sun, 25 Sep 2022 (21:11 IST)
ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ, ನಾಗ್ಪುರದಲ್ಲಿ ನಡೆದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತು. ಇದೇ ವೇಳೆ ಮೈದಾನದ ಡ್ರೇಸ್ಸಿಂಗ್ ರೂಮ್ ಬಾಲ್ಕನಿಯಲ್ಲಿ ಕಾಣಿಸಿಕೊಂಡ ಕೊಹ್ಲಿಯನ್ನು ಅಭಿಮಾನಿಗಳು ಆರ್ಸಿಬಿ ತಂಡ ಘೋಷವಾಕ್ಯದೊಂದಿಗೆ ಸ್ವಾಗತಿಸಿದ್ದರು. ಇತ್ತ ಅಭಿಮಾನಿಗಳು ಆರ್ಸಿಬಿ ಎನ್ನುತ್ತಿದ್ದಂತೆ ಅತ್ತ ಕೊಹ್ಲಿ ತುಸು ಕೋಪಗೊಂಡಂತೆ ಭಾಸವಾಗಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ಘೋಷವಾಕ್ಯ ಮೊಗಳುತ್ತಿದ್ದಂತೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಜೆರ್ಸಿ ಮೇಲಿರುವ ಲೋಗೋವನ್ನು ತೋರಿಸಿದರು. ಈ ಮೂಲಕ ನಾನು ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಹೊರತು ಐಪಿಎಲ್ ಫ್ರಾಂಚೈಸಿ ಅಲ್ಲ ಎಂದು ಅಭಿಮಾನಿಗಳಿಗೆ ಸನ್ನೆ ಮಾಡಿದರು. ಕೊಹ್ಲಿಯ ಸನ್ನೆಯನ್ನು ಗಮನಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಕ್ಷಣವೇ ಆರ್ಸಿಬಿ ಘೋಷಣೆಗಳನ್ನು ನಿಲ್ಲಿಸಿದರು. ಇದೇ ವೇಳೆ ವಿರಾಟ್ ಕೊಹ್ಲಿಯ ಪಕ್ಕದಲ್ಲೇ ಇದ್ದ ಮತ್ತೋರ್ವ ಆರ್ಸಿಬಿ ಆಟಗಾರ ಹರ್ಷಲ್ ಪಟೇಲ್ ನಗುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿರಾಟ್ ಕೊಹ್ಲಿಯ ನಡೆಗೆ ಹಲವರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.