ಕರ್ನಾಟಕದ ಮಾಜಿ ಕಲಾತ್ಮಕ ಆಟಗಾರ ಹಾಗೂ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಮತ್ತು ಅವರದ್ದೇ ಸ್ಫೂರ್ತಿಯಿಂದ ಕ್ರಿಕೆಟ್ ಲೋಕದಲ್ಲಿ ಅವರದ್ದೇ ಹೆಜ್ಜೆ ಗುರುತಿನಲ್ಲಿ ಸಾಗುತ್ತಿರುವ ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್… ಈ ಇಬ್ಬರು ರಾಹುಲ್ ಗಳ ಚುಕ್ಕಾಣಿಯಲ್ಲಿ ಮೊದಲ ಬಾರಿ ಭಾರತ ತಂಡ ಹರಿಣಗಳನ್ನು ಬೇಟೆಯಾಡಲು ಸಜ್ಜಾಗಿದೆ.
ನಾಯಕ ರೋಹಿತ್ ಶರ್ಮ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡ ಗುರುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಶುಭಾರಂಭ ಮಾಡುವ ಗುರಿ ಹೊಂದಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಕೆಎಲ್ ರಾಹುಲ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ವದಾಖಲೆಗಿಂತ ಮುಂಬರುವ ಟಿ-೨೦ ವಿಶ್ವಕಪ್ ಟೂರ್ನಿಗೆ ತಂಡವನ್ನು ಸಂಯೋಜಿಸುವತ್ತ ಗಮನ ಹರಿಸಲಿದ್ದಾರೆ.
ಭಾರತ ತಂಡ ಸತತ 12 ಟಿ-20 ಪಂದ್ಯಗಳನ್ನು ಗೆದ್ದು ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಆಫ್ಘಾನಿಸ್ತಾನ ತಂಡದ ಜೊತೆ ಅಗ್ರಸ್ಥಾನ ಹಂಚಿಕೊಂಡಿದೆ. ನಾಳಿನ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಭಾರತ ಅತೀ ಹೆಚ್ಚು ಸತತ ಟಿ-20 ಪಂದ್ಯಗಳನ್ನು ಗೆದ್ದ ವಿಶ್ವದಾಖಲೆ ಬರೆಯಲಿದೆ.
ಹಾರ್ದಿಕ್ ಪಟೇಲ್ ಮರಳಿರುವುದರಿಂದ ಅವರನ್ನು ಆಲ್ ರೌಂಡರ್ ಮತ್ತು ಫಿನಿಷರ್ ಪಾತ್ರದಲ್ಲಿ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಮತ್ತೊಂದೆಡೆ ಐಪಿಎಲ್ ನಲ್ಲಿ ಮಿಂಚಿದ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಇಬ್ಬರಲ್ಲಿ ಯಾರನ್ನು ಆಡಿಸುವುದು, ಯಾವ ಕ್ರಮಾಂಕದಲ್ಲಿ ಆಡಿಸುವುದು ಎಂಬ ಬಗ್ಗೆ ಇಬ್ಬರು ರಾಹುಲ್ ಪಂದ್ಯದ ಕೊನೆಯಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಕೆಎಲ್ ರಾಹುಲ್ ಭರ್ಜರಿ ಫಾರ್ಮ್ ನಲ್ಲಿದ್ದು, ಐಪಿಎಲ್ ನಲ್ಲಿ ರನ್ ಹೊಳೆ ಹರಿಸಿದ್ದರು. ಇದೇ ಫಾರ್ಮ್ ಅನ್ನು ದಕ್ಷಿಣ ಆಫ್ರಿಕಾ ವಿರುದ್ಧವೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದ್ದು, ಬೌಲಿಂಗ್ ಬಗ್ಗೆ ವಿಶ್ವಾಸವಿದ್ದರೂ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಭಾರತದ ನೆಲದಲ್ಲಿ ಆಡಿದ ಅನುಭವ ಹೊಂದಿರುವುದರಿಂದ ಈ ಸರಣಿ ಕುತೂಹಲ ಮೂಡಿಸಿದೆ.