ಚಿಕನ್ ದೊಣ್ಣೆ ಬಿರಿಯಾನಿ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಅದರಲ್ಲೂ ಮಂಡ್ಯ, ಬೆಂಗಳೂರು, ಮೈಸೂರಿನವರು ಹೆಚ್ಚಾಗಿ ಇಷ್ಟ ಪಡುವ ದೊಣ್ಣೆ ಬಿರಿಯಾನಿಯನ್ನು ತುಂಬಾನೇ ಸುಲಭದಲ್ಲಿ ತಯಾರಿಸಬಹುದು. ದೊಣ್ಣೆ ಬಿರಿಯಾನಿ ತಿನ್ನಲು ಎಷ್ಟು ಟೇಸ್ಟ್ ಇರುತ್ತದೆಯೋ, ಅಷ್ಟೇ ಸುಲಭವಾಗಿ ನಾವು ಬಿರಿಯಾನಿಯನ್ನು ತಯಾರಿಸಬಹುದು.
ನೀವು ಮಾಡುವ ದೊಣ್ಣೆ ಬಿರಿಯಾನಿ ಎಲ್ಲರಿಗೂ ಇಷ್ಟ ಆಗಬೇಕಂದರೆ ಈ ಒಂದು ಟ್ರಿಕ್ಸ್ ಅನ್ನು ಬಳಸಿ. ಅದೇನೆಂದರೆ ಕುಕ್ಕರ್‌ನಲ್ಲಿ ಚಿಕನ್ ಮತ್ತು ಅನ್ನವನ್ನು ಬೇಯಿಸಲು ಇಡುವಾಗ ನೀರನ್ನು ಸ್ವಲ್ಪ ಬಿಸಿ ಮಾಡಿ ಹಾಕಿ. ಈ ರೀತಿ ಮಾಡುವುದರಿಂದ ಚಿಕನ್ ದೊಣ್ಣೆ ಬಿರಿಯಾನಿ ತುಂಬಾನೇ ಟೇಸ್ಟಿಯಾಗುತ್ತೆ.
ದೊಣ್ಣೆ ಬಿರಿಯಾನಿ ಮಾಡುವ ವಿಧಾನ ಹೀಗಿದೆ.
ಮೊದಲು ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ. ನಂತರ ಅದಕ್ಕೆ ಈರುಳ್ಳಿ, ಎಲ್ಲ ಮಸಾಲೆ ಪದಾರ್ಥ(ಲವಂಗ, ಚೆಕ್ಕೆ, ಏಲಕ್ಕಿ, ಸೋಂಪು ಕಾಳು, ಸ್ಟಾರ್) ಹಾಗೂ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಎಣ್ಣೆಯಲ್ಲಿ ಬಾಡಿಸಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಬೆಳ್ಳುಳ್ಳಿ, ಶುಂಠಿ ಮತ್ತು ಕಾಯಿಮೆಣಸು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.
ನಂತರ ಒಂದು ಕುಕ್ಕರ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ. ಅದಕ್ಕೆ ಪಲಾವ್ ಎಲೆ, ಚೆಕ್ಕೆ, ಲವಂಗ ಮತ್ತು ಏಲಕ್ಕಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ನಂತರ ಕಟ್ ಮಾಡಿ ಇಟ್ಟುಕೊಂಡಿರುವ ಈರುಳ್ಳಿ, ಟೊಮೆಟೋ ಸೇರಿಸಿ ಸ್ವಲ್ಪ ಪ್ರೈ ಮಾಡಿ. ನಂತರ ತೊಳೆದಿಟ್ಟುಕೊಂಡಿರುವ ಚಿಕನ್ ಹಾಕಿ. ಮೂರು ನಿಮಿಷ ಚಿಕನ್ ಬೆಂದ ನಂತರ ಅದಕ್ಕೆ ಸ್ವಲ್ಪ ಅರಿಶಿನ, ಉಪ್ಪು, ಸ್ವಲ್ಪ ಮೊಸರು ಸೇರಿಸಿ ಬೇಯಿಸಿಕೊಳ್ಳಿ. ಚಿಕನ್ ಈ ಮಿಶ್ರಣದೊಂದಿಗೆ ಸ್ವಲ್ಪ ಬೆಂದ ನಂತರ ಪೇಸ್ಟ್ ಮಾಡಿ ಇಟ್ಟುಕೊಂಡಿರುವ ಮಿಶ್ರಣವನ್ನು ಹಾಕಿ ಮೂರು ನಿಮಿಷ ಬೇಯಿಸಿ.
ನಂತರ ಅಕ್ಕಿ ಒಂದು ಲೋಟ ತೆಗೆದುಕೊಂಡರೆ ನೀರು ಅದೇ ಲೋಟದಲ್ಲಿ ಎರಡು ಲೋಟ ನೀರು ತೆಗೆದುಕೊಳ್ಳಿ. ಆ ನೀರನ್ನು ಸ್ವಲ್ಪ ಕುದಿಸಿ. ಇದೀಗ ತೊಳೆದ ಅಕ್ಕಿಯನ್ನು ಹಾಕಿ. ನಂತರ ಬಿಸಿ ಮಾಡಿದ ನೀರನ್ನು ಸೇರಿಸಿ ಮುಚ್ಚಲ ಮುಚ್ಚಿ.
ಈ ರೀತಿ ದೊಣ್ಣೆ ಬಿರಿಯಾನಿ ಮಾಡುವುದರಿಂದ ಟೇಸ್ಟ್ ಸೂಪರ್ ಆಗಿರುತ್ತೆ. ಅದರ ಜತೆಗೆ ಬೇಗನೂ ಆಗುತ್ತದೆ.